ಕುಂದಾಪುರ, ಫೆ 28 : ಮೊವಾಡಿ-ನಾಡ ನಡುವೆ ಸೌಪರ್ಣಿಕಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಬೇಕೆಂಬ ಅನೇಕ ವರ್ಷಗಳ ಬೇಡಿಕೆಗೆ ಸರಕಾರ ಸ್ಪಂದಿಸಿದ್ದು ಸುಮಾರು ೭ ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ರಾಜ್ಯ ರಸ್ತೆ ನಿಗಮದ ಮೂಲಕ ನೂತನ ಸೇತುವೆ ನಿರ್ಮಾಣವಾಗಲಿದೆ. ಈ ಸೇತುವೆ ನಿರ್ಮಾಣವಾಗುವುದರಿಂದ ದೇವಳ್ಳಿ, ಆನಗೋಡು, ಮೊವಾಡಿ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ನಾಡಗುಡ್ಡೆಯಂಗಡಿ ಪ್ರದೇಶ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ಅವರು ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊವಾಡಿಯಲ್ಲಿ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮೊವಾಡಿ-ನಾಡ ಸಂಪರ್ಕ ಸೇತುವೆ ನಿರ್ಮಾಣ ಕಾರ್ಯಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಕಳೆದ ಐದು ವರ್ಷಗಳ ಅವಧಿಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಅನೇಕ ಸಂಪರ್ಕ ಸೇತುವೆಗಳ ನಿರ್ಮಾಣ ಕಾರ್ಯ ನಡೆದಿದೆ. ಕನ್ನಡಕುದ್ರು, ಮಾರಸ್ವಾಮಿ ಸೇತುವೆ ಸಹಿತ ವಿವಿಧೆಡೆ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ವಿವಿಧ ರಸ್ತೆಗಳ ಕಾಂಕ್ರೀಟಿಕರಣ, ಡಾಂಬರೀಕರಣ ಕಾರ್ಯ ಮಾಡಲಾಗಿದೆ. ಜನರ ಆಸೆ ಮತ್ತು ನಿರೀಕ್ಷೆಯಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದ್ದು, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ ಎಂದರು.
ಮೊವಾಡಿ ಚರ್ಚ್ನಿಂದ ಡಾನ್ ಬಾಸ್ಕೋವರೆಗಿನ ರಸ್ತೆ ಕಾಂಕ್ರೀಟಿರಕಣ, ಡಾನ್ ಬಾಸ್ಕೋದಿಂದ ಮೊವಾಡಿ ತನಕ ರಸ್ತೆಯ ಡಾಂಬರೀಕಣಕ್ಕೆ ಚಾಲನೆ ನೀಡಲಾಗಿದ್ದು, ನೂತನವಾಗಿ ನಿರ್ಮಾಣಗೊಳ್ಳಲಿರುವ ಮೊವಾಡಿ ಸೇತುವೆ ಬಳಿಯಿಂದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕಾಂಕ್ರೀಟಿಕರಣಕ್ಕೆ ಅನುದಾನ ಒದಗಿಸಲು ಪ್ರಯತ್ನ ನಡೆಸಲಾಗುವುದು. ಸುನಾಮಿ ನಿಧಿಯಿಂದ ಮಂಜೂರಾದ ರಸ್ತೆಗಳ ಕಾಂಕ್ರೀಟಿಕರಣ ಕಾರ್ಯ ಕೂಡ ವೇಗದಿಂದ ಸಾಗುತ್ತಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದರ ಒಳಗಾಗಿ ಮಂಜೂರಾತಿ ದೊರಕಿದ ಎಲ್ಲಾ ಕಾರ್ಯಗಳಿಗೆ ಚಾಲನೆ ನೀಡುವ ಕೆಲಸ ಮಾಡಲಾಗುವುದು ಎಂದರು.
ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯ ನಾರಾಯಣ ಕೆ. ಗುಜ್ಜಾಡಿ, ಪಡುಕೋಣೆ ಚರ್ಚಿನ ಧರ್ಮಗುರು ಫ್ರೆಡ್ ಮಸ್ಕರೇನಸ್ ಲೂವಿಸ್, ನಾಡ ಗ್ರೆಗರಿ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಸಿಲ್ವಸ್ಟೆರ್ ಅಲ್ಮೇಡಾ ಶುಭ ಹಾರೈಸಿದರು. ತ್ರಾಸಿ ಗ್ರಾಪಂ ಉಪಾಧ್ಯಕ್ಷೆ ಜೀತಾ ಡಿಸಿಲ್ವಾ, ನಾಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೇನ್ ಮೇರಿ ಒಲಿವೇರಾ, ಗುತ್ತಿಗೆದಾರ ಕಿರಣ್ ಡಿಕೋಸ್ಟಾ, ಡಾನ್ ಬಾಸ್ಕೋ ಶಾಲೆಯ ಧರ್ಮಗುರುಗಳಾದ ರೆ.ಫಾ.ಮ್ಯಾಕ್ಸಿಮ್, ರೆ.ಫಾ.ಲಿಯೋ, ತ್ರಾಸಿ ಗ್ರಾಪಂ ಪಿಡಿಒ ಶೋಭಾ, ತಾಪಂ ಮಾಜಿ ಸದಸ್ಯರಾದ ಸತೀಶ ಎಂ.ನಾಯಕ್, ಪ್ರಭು ಕೆನಡಿ ಪಿರೇರಾ ಮತ್ತಿತರರು ಉಪಸ್ಥಿರಿದ್ದರು.