ಬಂಟ್ವಾಳ, ಸೆ18: ನಮ್ಮದು ಕೇವಲ ಭಾಷಣ ಮಾಡುವ ಮಂತ್ರ ಅಲ್ಲ. ಅಭಿವ್ರದ್ದಿ ಕಾರ್ಯಗಳನ್ನು ಅನುಷ್ಠಾನಕ್ಕೆ ತರುವ ಮಂತ್ರ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಬಂಟ್ವಾಳದಲ್ಲಿ ನಡೆದ ತಾಲೂಕು ಪಂಚಾಯತ್ ನ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ತಾನು ಯಾವತ್ತೂ ಕಾನೂನು ಮೀರಿ ಹೋಗಿಲ್ಲ, ಹೋಗುವುದು ಇಲ್ಲ. ಕಾನೂನನ್ನು ಗೌರವಿಸುವವನು. ಸಾರ್ವಜನಿಕರ ಅನುಕೂಲಕ್ಕಾಗಿ ಪಡೀಲ್ ನಲ್ಲಿ ಜಿಲ್ಲಾಧಿಕಾರಿ ಕಚೇರಿ ನಿರ್ಮಿಸಲು ಎಲ್ಲಾ ಸಿದ್ದತೆ ನಡೆಸಲಾಗಿತ್ತು. ಅದಕ್ಕೆ ವಿರೋಧ ವ್ಯಕ್ತವಾಗಿದ್ದಲ್ಲದೆ, ಕೆಲವರು ಕೋರ್ಟಿನ ಮೋರೆ ಹೋಗಿದ್ದರಿಂದ ಕಾಮಗಾರಿ ವಿಳಂಬವಾಗಿದೆ ಎಂದು ಹೇಳಿದರು.
ಬಿ.ಸಿ.ರೋಡಿನಲ್ಲಿರುವ ಹಳೇ ತಾಲೂಕು ಪಂಚಾಯತ್ ಕಟ್ಟಡವನ್ನು ತೆರವುಗೊಳಿಸಿ ಇಲ್ಲಿ ಪಿಪಿ ಮಾದರಿಯಲ್ಲಿ ಬಸ್ ನಿಲ್ದಾಣ ಸಹಿತ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದ್ದು, ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು. ಬಿ.ಸಿ.ರೋಡಿನಲ್ಲಿ ಮಿನಿ ವಿಧಾನಸೌಧ, ಕೆ.ಎಸ್.ಅರ್.ಟಿ ಸಿ ಬಸ್ ನಿಲ್ದಾಣ, ಮೆಸ್ಕಾಂ ಕಚೇರಿ ಕಟ್ಟಡ, ಪ್ರವಾಸಿ ಮಂದಿರ, ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಸಹಿತ ವಿವಿಧ ಅಭಿವೃದ್ದಿ ಕಾರ್ಯಗಳ ಉದ್ಘಾಟನೆಯನ್ನು ಮುಂದಿನ ತಿಂಗಳ ಮೊದಲ ವಾರದಲ್ಲಿ ಮುಖ್ಯಮಂತ್ರಿಯವರು ನೆರವೇರಿಸಲಿದ್ದಾರೆ ಎಂದರು.
ಸಭೆ ಆರಂಭವಾಗುತ್ತಿದ್ದಂತೆ ವಿಪಕ್ಷ ಸದಸ್ಯ ರಮೇಶ್ ಕುಡ್ಮೇರ್, ಯಶವಂತ ಪೂಜಾರಿ ಪೊಳಲಿ ಅವರು ಬಸ್ ತಂಗುದಾಣ ನಿರ್ಮಿಸುವ ಬಗ್ಗೆ ನಮ್ಮದೇನು ಅಭ್ಯಂತರವಿಲ್ಲ. ಸಚಿವರ ಮುತುವರ್ಜಿಯಲ್ಲಿಯೇ ಆ ಕೆಲಸ ಆಗಲಿ. ನಾವು ಸಂಪೂರ್ಣ ಸಹಕಾರ ನೀಡುತ್ತೆವೆ. ಆದರೆ ನಮಗೂ ಮರ್ಯಾದೆ ಇದೆ. ನಾವು ಕೂಡ ಜನಪ್ರತಿನಿಧಿಗಳು. ಬಸ್ ತಂಗುದಾಣದ ಬಗ್ಗೆ ನೀಲ ನಕಾಶೆ ಯಾರು ನಿರ್ಮಿಸುತ್ತಾರೆ ಎಂಬುದರ ಕುರಿತು ಸದಸ್ಯರಿಗೂ ಮಾಹಿತಿ ನೀಡಬೇಕು ಎಂಬುವುದು ಎಲ್ಲಾ ಸದಸ್ಯರ ಪರವಾಗಿ ಕೇಳಿದ್ದೆವು. ಇದನ್ನು ಸ್ಥಾಯಿ ಸಮಿತಿ ಸಹಿತ ಸಾಮಾನ್ಯ ಸಭೆಯಲ್ಲೂ ಒತ್ತಾಯಿಸಿದ್ದೆವು. ಆದರೆ ಈ ಕುರಿತು ನಮಗೆ ಸ್ಪಷ್ಟ ಮಾಹಿತಿ ಈವರೆಗೂ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು. ತಾಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಸಭಾಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ, ಮಂಗಳೂರು ಸಹಾಯಕ ಕಮೀಷನರ್ ರೇಣುಕಾ ಪ್ರಸಾದ್, ತಹಶೀಲ್ದಾರ್ ಪುರಂದರ ಹೆಗ್ಡೆ ವೇದಿಕೆಯಲ್ಲಿದ್ದರು. ಕಾರ್ಯನಿರ್ವಹಣಾಧಿಕಾರಿ ಸಿಪ್ರೀಯನ್ ಮಿರಾಂದ ಸ್ವಾಗತಿಸಿ, ವಂದಿಸಿದರು.