ಮಂಗಳೂರು, ಫೆ 28 : ಮಂಗಳೂರು ನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಇಂದು ಮೇಯರ್ ಕವಿತಾ ಸನಿಲ್ ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ಪ್ರತಿಪಕ್ಷ ಬಿಜೆಪಿ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಮೇಯರ್ ಪದವಿಗೇರುವ ಸಂದರ್ಭದಲ್ಲಿ ಕವಿತಾ ಸನಿಲ್ ಅವರು ಸಲ್ಲಿಸಿದ ಅಫಿಡವಿಟ್ ನಲ್ಲಿ ಪಿಯುಸಿ ಶೈಕ್ಷಣಿಕ ಅರ್ಹತೆಯನ್ನು ನೀಡಿದ್ದು, ಆದರೆ ಬಳಿಕ ಅನೇಕ ಸಭೆ ಸಮಾರಂಭಗಳಲ್ಲಿ, ಪತ್ರಿಕಾಗೋಷ್ಟಿಯಲ್ಲಿ ಕವಿತಾ ಸನಿಲ್ ತಾವು ಪದವೀಧರರು ಎಂದು ಹೇಳಿಕೊಂಡಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಗಣೇಶ್ ಹೊಸಬೆಟ್ಟು ಆರೋಪಿಸಿದರು. ಈ ಆರೋಪಕ್ಕೆ ದ್ವನಿಗೂಡಿಸಿದ ಬಿಜೆಪಿಯ ಸದಸ್ಯರು, ಶೈಕ್ಷಣಿಕ ಅರ್ಹತೆಗಳ ಬಗ್ಗೆ ಅನುಮಾನವಿದ್ದು, ಸ್ಪಷ್ಟೀಕರಣ ನೀಡುವಂತೆ ಆಗ್ರಹಿಸಿತು. ಇದೇ ವೇಳೆ ಮೇಯರ್ ಕವಿತಾ ಸನಿಲ್ ಅವರ ಸಹಾಯಕ್ಕೆ ಧಾವಿಸಿದ ಪಾಲಿಕೆಯ ಕಾಂಗ್ರೆಸ್ ಪಕ್ಷದ ಸದಸ್ಯರು ಸಭೆಯಲ್ಲಿ ವೈಯಕ್ತಿಕ ವಿಚಾರವನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸುದು ಸರಿಯಲ್ಲ , ಬಿಜೆಪಿ ಪ್ರತಿ ಬಾರೀ ಅವರ ವೈಯಕ್ತಿಕ ವಿಚಾರಗಳನ್ನು ಹಿಡಿದು ಮೇಯರ್ ತೇಜೋವಧೆಗೆ ಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂತಿಮವಾಗಿ ಮೇಯರ್ ಕವಿತಾ ಸನಿಲ್ ಪ್ರತಿಕ್ರಿಯಿಸಿ, ಕೌನ್ಸಿಲ್ ಜನರ ಮತ್ತು ನಗರದ ಸಮಸ್ಯೆಗಳನ್ನು ಚರ್ಚಿಸುವ ಸ್ಥಳವಾಗಿದೆ ಹೊರತು ನನ್ನ ವೈಯಕ್ತಿಕ ವಿಷಯಗಳನ್ನು ಚರ್ಚಿಸುವ ವೇದಿಕೆಯಲ್ಲ , ಆದರೂ ನನ್ನ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನನ್ನ ಬಳಿ ಇದ್ದೂ ಅವುಗಳನ್ನು ಬಹಿರಂಗಪಡಿಸಲು ಸಿದ್ಧವಾಗಿದ್ದೇನೆ ಎಂದರು.
ಮೇಯರ್ ಅವರ ಈ ಪ್ರತಿಕ್ರಿಯೆಯಿಂದ ತೃಪ್ತಿ ಹೊಂದಿದ್ದ ವಿರೋಧ ಪಕ್ಷ ಮುಂದಿನ ಚರ್ಚೆಯತ್ತ ಗಮನಹರಿಸಿತು. ಬಳಿಕ
ನಿವೇಶನ ಹಂಚಿಕೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ಪಾಲಿಕೆಯ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿತು.
ನಂತರ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮೇಯರ್ ಕವಿತಾ ಸನಿಲ್ ಅವರ ಅಧಿಕಾರಾವಧಿಯ ಕೊನೆಯ ಪಾಲಿಕೆ ಸಭೆ ಇದಾಗಿರೋದ್ರಿಂದ ಮೇಯರ್ ಕವಿತಾ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ನನ್ನ ಅಧಿಕಾರಾವಧಿಯಲ್ಲಿ, ಭಾರತದ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರನ್ನು ಸ್ವಾಗತಿಸುವ ಸುಸಂದರ್ಭ ನನಗೆ ಒದಗಿ ಬಂದಿರುವುದಕ್ಕೆ ನಾನು ಧನ್ಯನಾಗಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ರಾಮನಾಥ ರೈ ಅವರು ನೀಡಿದ ಮಾರ್ಗದರ್ಶನ ಮತ್ತು ಬೆಂಬಲಕ್ಕೆ ನಾನು ಅಭಾರಿಯಾಗಿದ್ದೇನೆ. ಪಕ್ಷದ ಮತ್ತು ವಿರೋಧ ಪಕ್ಷದ ಕಾರ್ಪೋರೇಟರ್ ನೀಡಿದ ಮಾರ್ಗದರ್ಶನ ನಗರದ ಅಭಿವೃದ್ದಿ ಯಲ್ಲಿ ಮತ್ತು ಆಡಳಿತದಲ್ಲಿ ನನಗೆ ನೆರವಾಗಿದೆ. ಮಾಧ್ಯಮಗಳೂ ಕೂಡಾ ನನ್ನ ಮತ್ತು ಜನರ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸಿವೆ.ಮೇಯರ್ ಆಗುವ ಮೊದಲು ನಾನು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ, ಆದ್ದರಿಂದ ನನ್ನ ಅಧಿಕಾರಾವಧಿಯ ನಂತರ ನಾನು ಸಾಮಾಜಿಕ ಕಾರ್ಯವನ್ನು ಕೈಗೊಳ್ಳುವಲ್ಲಿ ಸಕ್ರಿಯವಾಗಿ ಮುಂದುವರಿದು ಜನರಿಗೆ ಸೇವೆ ಸಲ್ಲಿಸಲು ಇಷ್ಟಪಡುತ್ತೇನೆ ಎಂದರು .