ಕಾಸರಗೋಡು, ಫೆ. 28 : ಜಿಲ್ಲೆಯಲ್ಲಿ ಫೆಬ್ರವರಿ ತಿಂಗಳ ಕೊನೆಯಾಗುತ್ತಲೇ ಜಿಲ್ಲೆಯ ಹೊಳೆ, ತೋಡುಗಳು ಬತ್ತಿ ಬರದಹತೊಡಗಿದೆ. ನೀರಿನ ಮೂಲವೇ ಮಾಯವಾಗಿದ್ದು , ಹೊಳೆಗಳು ಮರುಭೂಮಿಯಂತೆ ಗೋಚರಿಸುತ್ತಿದೆ. ಪ್ರಮುಖ ಹೊಳೆಗಳಲ್ಲಿ ನೀರಿನ ಹರಿವು ಸಂಪೂರ್ಣ ನಿಂತಿದ್ದು , ಬರಗಾಲದ ಛಾಯೆ ಈ ಬಾರಿ ಗೋಚರಿಸತೊಡಗಿದೆ. ಸಾಮಾನ್ಯವಾಗಿ ಮಾರ್ಚ್ - ಎಪ್ರಿಲ್ ತನಕ ಹೊಳೆಗಳಲ್ಲಿ ನೀರು ಲಭಿಸುತ್ತಿದ್ದರೂ ಕಳೆದ ಐದಾರು ವರ್ಷಗಳಿಂದ ಬೇಸಿಗೆ ಆರಂಭವಾಗುತ್ತಿದ್ದಂತೆ ನೀರಿನ ಮೂಲವೇ ಬತ್ತಿಹೋಗುತ್ತಿದೆ.
ಹೊಳೆಗಳಲ್ಲಿ ಹೊಂಡಗಳನ್ನು ತೋಡಿ ತಾತ್ಕಾಲಿಕ ಪರಿಹಾರಕ್ಕಾಗಿ ಕೃಷಿಕರು , ಹೊಳೆ ಬದಿಯ ಸಮೀಪವಾಸಿಗಳು ಪ್ರಯತ್ನದಲ್ಲಿದ್ದಾರೆ. ಏನಿದ್ದರೂ ಬೇಸಿಗೆ ಮಳೆಯನ್ನೇ ಕೃಷಿಕರು ಎದುರು ನೋಡುತ್ತಿದ್ದಾರೆ.ರಾಜ್ಯದಲ್ಲಿರುವ 44 ಹೊಳೆಗಳ ಪೈಕಿ 11 ಹೊಳೆಗಳೂ ಕಾಸರಗೋಡು ಜಿಲ್ಲೆಯಲ್ಲಿ ಹರಿಯು ತ್ತಿವೆ. ಆದರೂ ನೀರಿನ ಬರ ಎದುರಾಗಿರುವುದು ದುರಂತ ಎನ್ನಬಹುದು.ಜಿಲ್ಲೆಯ ಪ್ರಮುಖ ಹೊಳೆಗಳಾದ ಶಿರಿಯ , ಪುತ್ತಿಗೆ (ಅಂಗಡಿಮೊಗರು) ಹೊಳೆ ಬರಡಾಗಿದೆ. ನೀರಿನ ಹರಿವು ನಿಂತು ವಾರಗಳೇ ಕಳೆದಿವೆ. ಹೊಳೆಗಳು ಮರಳಿನಿಂದ ವಿಶಾಲವಾದ ಮೈದಾನ , ಮರುಭೂಮಿಯಂತೆ ಗೋಚರಿಸುತ್ತಿದೆ.
ಹೊಳೆಯಲ್ಲೇ ಹೊಂಡಗಳನ್ನು ತೋಡಿ ರಿಂಗ್ ಗಳನ್ನು ಬಳಸಿ ತಾತ್ಕಾಲಿಕ ನೀರಿನ ವ್ಯವಸ್ಥೆಯನ್ನು ಕೃಷಿಕರು ಮಾಡುತ್ತಿದ್ದಾರೆ.ಎರಡೂ ಮೂರು ಗ್ರಾಮಪಂಚಾಯತ್ ವ್ಯಾಪ್ತಿಯ ಸಾವಿರಾರು ಮನೆಗಳಿಗೆ ಕುಡಿಯುವ ನೀರಿನ ಸರಬರಾಜಿಗೆ ಈ ಹೊಳ ಯ ನೀರನ್ನು ಅವಲಂಬಿಸಿಕೊಂಡಿದ್ದಾರೆ. ಜಿಲ್ಲೆಯ ಹೆಚ್ಚಿನ ಗ್ರಾಮೀಣ ಪ್ರದೇಶಗಳಲ್ಲಿ ವರ್ಷಪೂರ್ತಿ ಲಭಿಸುತ್ತಿದ್ದ ನೀರು ಇದೀಗ ಡಿಸೆಂಬರ್-ಜನವರಿಯಲ್ಲೇ ಬತ್ತಿ ಹೋಗುತ್ತದೆ. ಕೃಷಿಗೆ ನೀರಿನ ಪೂರೈಕೆ ಇಲ್ಲದೆ ಕೃಷಿಯನ್ನೇ ನಂಬಿ ಬದುಕುವ ಕುಟುಂಬಗಳು ಅತಂತ್ರಗೊಂಡಿವೆ. ದಿನಕಳೆದಂತೆ ಜಲಮೂಲಗಳು ಬತ್ತಿಹೋಗುತ್ತಿದೆ. ಒಂದೆಡೆ ಅಕ್ರಮ ಮರಳುಗಾರಿಕೆ , ಇನ್ನೊಂದೆಡೆ ಕೊಳವೆ ಬಾವಿಗಳು ಜೊತೆಗೆ ಜಲಸಂರಕ್ಷಣೆಗೆ ಯಾವುದೇ ಒತ್ತು ನೀಡದಿರುವುದು ಇಂದಿನ ದುಸ್ಥಿತಿಗೆ ಕಾರಣ ಎನ್ನಬಹುದು.
ಏಪ್ರಿಲ್ , ಮೇ ತಿಂಗಳಲ್ಲಿ ಶಾಲಾ ಮಕ್ಕಳ ರಜಾ ಸಮಯವಾಗಿದೆ. ವರ್ಷಗಳ ಹಿಂದೆ ಈ ಹೊಳೆಗಳಲ್ಲಿ ಮಕ್ಕಳಾಟ ಕಂಡುಬರುತ್ತಿತ್ತು. ಒಂದೆಡೆ ಬಿಸಿಲು , ಇನ್ನೊಂದೆಡೆ ಸೆಕೆ , ಮಕ್ಕಳು ಈ ಉರಿ ಬಿಸಿಲಿನ ತಂಪು ಪಡೆಯಲು ಹೊಳೆ ನೀರಿನಲ್ಲಿ ಈಜಿ , ಆಟವಾಡಿ ಮಜಾ ಕಳೆಯುತ್ತಿದ್ದರು. ಆದರೆ ಇಂದು ಉರಿಬಿಸಿಲು , ಸೆಕೆ ನಡುವೆ ಸುಡುವ ಮರಳಿನ ಲ್ಲಿ ಆಟವಾಡಬೇಕಾದ ಅನಿವಾರ್ಯ ಇಂದು ತಲೆದೋರುತ್ತಿದೆ. ಹಿಂದೆ ನೀರಿನಲ್ಲಿ ಮಕ್ಕಳ ಆಟ ನೋಡುತ್ತಿದ್ದರೆ ಇಂದು ಮರಳಿನ ಮೈದಾನದಲ್ಲಿ ಆಟ ಕಂಡುಬರುತ್ತಿದೆ.
ಕಳೆದ ಐದಾರು ವರ್ಷಗಳಿಂದ ಜಿಲ್ಲೆಯ ಹೊಳೆಗಳು ಬೇಸಿಗೆ ಆರಂಭದಲ್ಲೇ ನೀರಿನ ಹರಿವು ನಿಂತು ಬರಡಾಗುತ್ತಿದೆ. ನವಂಬರ್ ತನಕ ಮಳೆ ಲಭಿಸುತ್ತಿದ್ದರೂ ಜನವರಿ ಕೊನೆಯ ವೇಳೆಗೆ ಬರಿದಾಗುತ್ತಿದ್ದು , ಉಳಿದ ನಾಲ್ಕು ತಿಂಗಳು ನೀರಿಗಾಗಿ ಹಪಹಪಿಸುವಂತಹ ಸ್ಥಿತಿ ತಲೆದೋರುತ್ತಿದೆ. ಬೇಸಿಗೆ ಮಳೆ ಲಭಿಸದೆ ಹೋದಲ್ಲಿ ಕುಡಿಯುವ ನೀರಿಗಾಗಿಯೂ ಪರದಾಡ ಬೇಕಾದ ಸ್ಥಿತಿ ಉಂಟಾಗಲಿದೆ. ಜಿಲ್ಲೆಯಲ್ಲಿ ಜೂನ್ ನಿಂದ ಅಕ್ಟೊಬರ್ ತನಕ ಸರಾಸರಿ ಮಳೆ ಲಭಿಸುತ್ತದೆ. ಆದರೆ ಮಳೆ ಬೇಸಿಗೆ ಹತ್ತಿರುವಾಗುತ್ತಿದಂತೆ ಕುಡಿಯುವ ನೀರಿಗೂ ತತ್ವಾರ ಉಂಟಾಗುತ್ತಿದೆ.
ಹೊಳೆಗಳಲ್ಲೇ ಬಾವಿ
ಸಾಮಾನ್ಯವಾಗಿ ನೀರಿಗಾಗಿ ಮನೆ ಅಂಗಳ , ತೋಟ , ಇತರ ಕಡೆಗಳಲ್ಲಿ ಬಾವಿ, ಕೆರೆಗಳನ್ನು ತೋಡಲಾಗು ತ್ತಿತ್ತು . ಆದರೆ ಇಂದು ಹೊಳೆ, ತೋಡುಗಳಲ್ಲಿ ಬಾವಿಗಳನ್ನು ತೊಡುವ ದುಸ್ಥಿಗೆ ಉಂಟಾಗಿದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ಬಾವಿಗಳಲ್ಲಿ ನೀರು ಲಭಿಸದ ಸ್ಥಿತಿ ಉಂಟಾಗುತ್ತಿದೆ. ಹೊಳೆಗಳು ಬತ್ತಿ ಬರಡಾಗುತ್ತಿದೆ. ಇದರಿಂದ ಹೊಳೆಗಳಲ್ಲಿ ನೀರನ್ನು ಹುಡುಕಿ ಬಾವಿಗಳನ್ನು ತೊಡುವ ದ್ರಶ್ಯಗಳು ಕಂಡುಬರುತ್ತಿದೆ. ಜಿಲ್ಲೆಯ ಅಂಗಡಿಮೊಗರು( ಪುತ್ತಿಗೆ ) , ಕಂಬಾರು ಹೊಳೆ ಸೇರಿದಂತೆ ಹಲವೆಡೆ ಈಗಾಗಲೇ ಮರಳನ್ನು ತೆಗೆದು ಹೊಂಡ ನಿರ್ಮಿಸಿ ಬಳಿಕ ರಿಂಗ್ ಗಳನ್ನು ಅಳವಡಿಸಿ ಬಾವಿ ನಿರ್ಮಿಸಲಾಗುತ್ತಿದೆ. ಇದರಿಂದ ಲಭಿಸುವ ಅಲ್ಪ ನೀರು ಕೃಷಿ ಹಾಗೂ ಕುಡಿಯಲು ಬಳಸುವ ಅನಿವಾರ್ಯ ಸ್ಥಿತಿ ಉಂಟಾಗಿದೆ. ಬಾವಿ , ಕೊಳವೆ ಬಾವಿ ಕೊರೆದರೂ ನೀರು ಲಭಿಸುತ್ತಿಲ್ಲ . ಕೊನೆಗೆ ಹೊಳೆಯಲ್ಲೂ ಬಾವಿ ತೊಡುವ ಸ್ಥಿತಿ ಉಂಟಾಗಿದ್ದು , ಮುಂದಿನ ವರ್ಷಗಳಲ್ಲಿ ಹೊಳೆಗಳಲ್ಲೂ ನೀರು ಲಭಿಸದ ಸ್ಥಿತಿ ತಲೆದೋರಲಿದೆಯೇ ಎಂಬ ಸಂಶಯ ಈಗಾಗಲೇ ಕಾಡುತ್ತಿದೆ. ಅಕ್ರಮ ಮರಳುಗಾರಿಕೆ ತಡೆ , ನೀರು ಸಂಗ್ರಹ ಸೇರಿದಂತೆ ಹಲವು ಯೋಜನೆಗಳತ್ತ ಗಮನ ಅನಿವಾರ್ಯವಾಗಿದೆ .
ಹೊಳೆಗಳಲ್ಲಿ 100 ಮೀಟರ್ ಗೆ ಹತ್ತಕ್ಕೂ ಅಧಿಕ ಪಂಪ್ ಗಳು
ಹೊಳೆಗಳಲ್ಲಿ ಅಲ್ಲಲ್ಲಿ ಕಂಡುಬರುತ್ತಿರುವುದು ಮರಳು ತೆಗೆದ ಹೊಂಡಗಳು. 100 ಮೀಟರ್ ಅಂತರದಲ್ಲಿ ಹತ್ತಕ್ಕೂ ಅಧಿಕ ಮೋಟಾರ್ ಪಂಪ್ ಗಳು ಕಂಡುಬರುತ್ತಿವೆ. ಹೊಳೆಯಲ್ಲಿ ನೀರಿನ ಹರಿವು ನಿಲ್ಲುತ್ತಿದಂತೆ ಹೊಂಡಗಳನ್ನು ತೋಡಿ ಮೋಟಾರ್ ಪಂಪ್ ಮೂಲಕ ನೀರನ್ನು ಮೇಲಕ್ಕೆತ್ತಲಾಗುತ್ತಿದ್ದು , ಮಾರ್ಚ್ ವೇಳೆಗೆ ಈ ನೀರು ಲಭಿಸುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ಕೃಷಿಕರು