ಫೆ. 28: ಕಂಚಿ ಕಾಮಕೋಟಿ ಮಠದ ಶಂಕರಾಚಾರ್ಯ ಪೀಠದ ಹಿರಿಯ ಯತಿಗಳಾದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ ಅವರು ಬುಧವಾರ ಕಾಲೈಕ್ಯರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. 1954 ರಿಂದ ಕಂಚಿ ಪೀಠದ 69 ನೇ ಪೀಠಾಧಿಪತಿಯಾಗಿ ಜಯೇಂದ್ರ ಸರಸ್ವತಿಗಳು ಧಾರ್ಮಿಕ ಕಾರ್ಯಗಳಲ್ಲಿ ನಿರತರಾಗಿದ್ದರು. ಕಳೆದ ಎರಡು ತಿಂಗಳ ಹಿಂದೆ ಅವರು ಪಾರ್ಶ್ವವಾಯುಗೆ ತುತ್ತಾಗಿದ್ದರು. ಇದಕ್ಕಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ನೀಡುತ್ತಿದ್ದ ವೇಳೆ ಹೃದಯಾಘಾತವಾಗಿತ್ತು. ಈ ಎರಡು ಖಾಯಿಲೆಗೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಇದಲ್ಲದೆ ವಯೋಸಹಜ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಶ್ರೀಗಳು ಚೆನ್ನೈನ ಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಶ್ರೀಗಳಿಗೆ ತಮಿಳು ನಾಡು ಸೇರಿದಂತೆ ವಿಶ್ವಾದ್ಯಂತ ಅಪಾರ ಭಕ್ತರಿದ್ದಾರೆ. ಇನ್ನು ಕಂಚಿ ಶ್ರೀ ಗಳ ವಿರುದ್ದ ಹಲವು ವಿವಾದಗಳು, ಪ್ರಕರಣಗಳೂ ಕೇಳಿ ಬಂದಿದ್ದವು.