ಮಂಗಳೂರು, ಫೆ 27: ದೇಶದಲ್ಲಿಯೇ ಪ್ರಪ್ರಥಮವಾಗಿ ವಿಶಿಷ್ಟ ಸೌಲಭ್ಯಗಳನ್ನು ಹೊಂದಿರುವ ಅಪರೂಪದ 3ಡಿ ತಾರಾಲಯ ಮಂಗಳೂರಿನಲ್ಲಿ ನಿರ್ಮಾಣಗೊಂಡಿದೆ.
ಮಂಗಳೂರು ನಗರ ಹೊರವಲಯದ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ 3ಡಿ ತಾರಾಲಯ ನಿರ್ಮಾಣವಾಗೊಂಡಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಮಂಗಳೂರು ನಗರದಲ್ಲಿ 3ಡಿ ತಾರಾಲಯ ನಿರ್ಮಾಣಗೊಂಡಿದ್ದು, ಮಾರ್ಚ್ 2ರಿಂದ ಈ ತಾರಾಲಯವು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ.
ಪಿಲಿಕುಳ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ನಿರ್ಮಾಣಗೊಂಡಿರುವ ಸ್ವಾಮಿ ವಿವೇಕಾನಂದ ತಾರಾಲಯ ಭಾರತದ ಪ್ರಥಮ 3ಡಿ ತಾರಾಲಯವಾಗಿದೆ. ರಾಜ್ಯ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅನುದಾನದಿಂದ ನಿರ್ಮಾಣವಾಗಿರುವ ಈ ಸ್ವಾಮಿ ವಿವೇಕಾನಂದ ತಾರಾಲಯವು 18 ಮೀಟರ್ ವ್ಯಾಸದಷ್ಟು ದೊಡ್ಡದಿದೆ.ಆಧುನಿಕ ತಂತ್ರಜ್ಞಾನದ ನ್ಯಾನೋಸೀಮ್ ಡೂಮ್ ಅನ್ನು 15 ಡಿಗ್ರಿ ಕೋನದಲ್ಲಿ ಇರಿಸಲಾಗಿದೆ. ಅಪ್ಟೋ- ಮೆಕ್ಯಾನಿಕಲ್ ಮತ್ತು 8ಕೆ ಡಿಜಿಟಲ್ ಪ್ರೊಜೆಕ್ಷನ್ ಸಿಸ್ಟಂಗಳನ್ನು ಅಳವಡಿಸಲಾಗಿದ್ದು, 3ಡಿ ವ್ಯವಸ್ಥೆಯ ಮೂಲಕ ವೀಕ್ಷಕರಿಗೆ ಹೊಸ ಅನುಭವ ನೀಡಲಿದೆ. ಮಾತ್ರವಲ್ಲದೇ, ಈ ತಾರಾಲಯದಲ್ಲಿ ಸುಮಾರು 170 ಮಂದಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಮಾರ್ಚ್ 2 ರಂದು ಆರಂಭವಾಗಲಿರುವ ಈ ತಾರಾಲಯದಲ್ಲಿ ತಲಾ 25 ನಿಮಿಷಗಳ ನಾಲ್ಕರಿಂದ ಆರು ಪ್ರದರ್ಶನಗಳನ್ನು ಪ್ರತಿ ದಿನ ನೀಡಲು ನಿರ್ಧರಿಸಲಾಗಿದೆ. ಪ್ರಸ್ತುತ ನಾಲ್ಕು ತಾರಾ ಲೋಕಕ್ಕೆ ಸಂಬಂಧಿಸಿದ ನಾಲ್ಕು ವಿಷಯಗಳಲ್ಲಿ ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಪ್ರದರ್ಶನ ನಡೆಯಲಿದೆ. ಪಿಲಿಕುಳದಲ್ಲಿರುವ ಈ ತಾರಾಲಯಕ್ಕೆ ಆನ್ ಲೈನ್ ನಲ್ಲೂ ಟಿಕೆಟ್ ಬುಕಿಂಗ್ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಮಕ್ಕಳಿಗೆ ಒಂದು ಪ್ರದರ್ಶನ ವೀಕ್ಷಿಸಲು 25 ರುಪಾಯಿ ಹಾಗೂ ಸಾರ್ವಜನಿಕರಿಗೆ ಒಂದು ಪ್ರದರ್ಶನ ವೀಕ್ಷಿಸಲು 60 ರುಪಾಯಿ ನಿಗದಿಪಡಿಸಲಾಗಿದೆ.