ಕುಂದಾಪುರ, ಸೆ18: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲ್ಲೂರು ದೇವಳದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ದುಡಿಯುತ್ತಿರುವ ಜಯರಾಮ್ ಶೆಟ್ಟಿ ಅವರ ಮಗ ಕಿಶನ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ಯುವಕ. ವಿಪರೀತ ಕುಡಿತದ ಚಟವನ್ನು ಹೊಂದಿದ್ದ ಇವನಿಗೆ ಪೋಷಕರು ಕುಡಿತದ ಚಟವನ್ನ ಬಿಡಿಸಲೆಂದು ರಿಹ್ಯಾಬಿಲಿಟೇಶನ್ ಕೇಂದ್ರಕ್ಕೆ ಕಳುಹಿಸಿದ್ದರು. ಅಲ್ಲಿಂದ ಗುಣಮುಖನಾಗಿ ಬಂದವನು ವಿಪರೀತ ಖಿನ್ನತೆಗೊಳಗಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಿಶನ್ ತಂದೆ ಜಯರಾಮ್ ಶೆಟ್ಟಿ ಎಎಸ್ಐಯಾಗಿ ನಿವೃತ್ತರಾಗಿದ್ದು, ಉತ್ತಮ ಹೆಸರನ್ನೂ ಕೂಡ ಮಾಡಿದ್ದರು. ನಿವೃತ್ತರಾದ ಬಳಿಕ ಕೊಲ್ಲೂರು ದೇವಳದಲ್ಲಿ ಸೆಕ್ಯೂರಿಟಿ ಗಾರ್ಡ ಆಗಿ ಕೆಲಸಕ್ಕೆ ಸೇರಿ, ಕೊಲ್ಲೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕಿಶನ್ ಈ ಹಿಂದೆ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕುಡಿದು ನಡೆಸಿದ ವಿಪರೀತ ವರ್ತನೆಯಿಂದ ಜಿಲ್ಲೆಯ ಹಲವು ಠಾಣೆಗಳಲ್ಲಿ ಪ್ರಕರಣ ಕೂಡ ಇವನ ವಿರುದ್ಧ ದಾಖಲಾಗಿತ್ತು.
ಈ ಹಿನ್ನೆಲೆ ಬೇಸರಗೊಂಡಿದ್ದ ಜಯರಾಮ್ ಶೆಟ್ಟಿ ಹಲವು ಭಾರಿ ಮಗನಿಗೆ ಎಚ್ಚರಿಕೆಯನ್ನು ಕೂಡ ನೀಡಿದ್ದರು. ಆದರೆ ಮಾತಿಗೆ ಬಗ್ಗದ ಕಾರಣ ಬೆಂಗಳೂರಿನಲ್ಲಿ ಕುಡಿತ ಬಿಡಿಸುವ ಕೇಂದ್ರಕ್ಕೆ ಕಳುಹಿಸಿದ್ದು, ಕೆಲವೇ ದಿನಗಳ ಹಿಂದೆ ಅವನನ್ನು ಅಲ್ಲಿಂದ ಕರೆದುಕೊಂಡು ಬಂದಿದ್ದರು. ಅಲ್ಲಿಂದ ಬರುವಾಗಲೇ ಖಿನ್ನತೆಗೊಳಗಾಗಿದ್ದ ಕಿಶನ್ ಸೋಮವಾರ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.