ಮಂಗಳೂರು, ಫೆ 26 : ಮಂಗಳೂರು ಮಹಾನಗರ ಪಾಲಿಕೆಯ 2018-19 ನೇ ಸಾಲಿನ ಬಜೆಟ್ (ಫೆ. 26) ಇಂದು ಮಂಡನೆಯಾಗಲಿದ್ದು, ಈ ಬಾರಿಯ ಬಜೆಟ್ನಲ್ಲಿ ಪೇಪರ್ಲೆಸ್ ಹಾಗೂ ಆನ್ಲೈನ್ ಸೇವೆಗಳಿಗೆ ಮತ್ತಷ್ಟು ಆದ್ಯತೆ ನೀಡುವ ಸಾಧ್ಯತೆಗಳಿವೆ. ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಇಂದು ಸಂಜೆ ಪಾಲಿಕೆಯ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ಬಜೆಟ್ ಮಂಡನೆ ಮಾಡಲಿದ್ದಾರೆ. ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಳೆದ ಬಜೆಟ್ನಲ್ಲಿ ಪಾಲಿಕೆಯ 19 ಸೇವೆಗಳನ್ನು ಆನ್ಲೈನ್ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಅದೇ ರೀತಿಯಲ್ಲಿ ಪಾಲಿಕೆಯ ಎಲ್ಲಾ ವಿಭಾಗಗಳನ್ನು ಹಂತಹಂತವಾಗಿ ಪೇಪರ್ಲೆಸ್ ಮಾಡುವ ಗುರಿ ಹೊಂದಲಾಗಿತ್ತು. ಆದರೆ ಪಾಲಿಕೆಯ ಕಂದಾಯ ವಿಭಾಗದಲ್ಲಿ ಶೇ.90ರಷ್ಟು ಪೇಪರ್ಲೆಸ್ ಜಾರಿಗೊಳಿಸಲಾಗಿದೆ. ಟ್ರೇಡ್ ಲೈಸನ್ಸ್, ಟೌನ್ಹಾಲ್ ಬುಕ್ಕಿಂಗ್, ಖಾತಾ, ನೀರು ಬಿಲ್ ಪಾವತಿ, ಎಲ್ಲಾ ತರಹದ ಅರ್ಜಿ ಸ್ವೀಕಾರ ಪ್ರಕ್ರಿಯೆ ಆನ್ಲೈನ್ ಮೂಲಕವೇ ನಡೆಯುತ್ತಿದೆ. ಆದರೆ ತೆರಿಗೆ ಪಾವತಿಯನ್ನು ಆನ್ ಲೈನ್ನಲ್ಲಿ ಅಳವಡಿಸಲು ಡಾಟಾ ಸಂಗ್ರಹಕ್ಕೆ ಸಮಯಾವಕಾಶ ಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.