ದುಬೈನಲ್ಲಿ ಹೃದಯಾಘಾತದಿಂದ ಶನಿವಾರ ರಾತ್ರಿ ನಿಧನ ಹೊಂದಿರುವ ಪಂಚಭಾಷಾ ನಟಿ ಶ್ರೀದೇವಿ ಅವರ ಪಾರ್ಥೀವ ಶರೀರ ಇಂದು ರಾತ್ರಿ 11 ಗಂಟೆಯ ಸುಮಾರಿಗೆ ಮುಂಬಯಿಗೆ ತರಲಾಗುತ್ತಿದೆ. ದುಬೈನಲ್ಲಿ ಕುಟುಂಬ ಸದಸ್ಯರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಪತಿ ಬೋನಿಕಪೂರ್ ಹಾಗೂ ಕಿರಿಯ ಪುತ್ರಿ ಖುಷಿ ಕಪೂರ್ ಜತೆ ದುಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತಗೊಂಡು ನಿಧನರಾಗಿದ್ದ ನಟಿ ಶ್ರೀ ದೇವಿ ಅವರ ಪಾರ್ಥೀವ ಶರೀರವನ್ನು ಅನಿಲ್ ಅಂಬಾನಿ ಮಾಲೀಕತ್ವದ ವಿಶೇಷ ಜೆಟ್ ವಿಮಾನದ ಮೂಲಕ ಭಾರತಕ್ಕೆ ತರಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವಿಳಂಬವಾದ ಕಾರಣ ಪಾರ್ಥೀವ ಶರೀರ ತರಲು ತಡವಾಗುತ್ತಿದೆ ಎಂದು ಶ್ರೀದೇವಿ ಪತಿ ಬೋನಿ ಕಪೂರ್ ತಿಳಿಸಿದ್ದಾರೆ. ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಕುಟುಂಬಕ್ಕೆ ಯುಎಇಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ನೆರವು ನೀಡಲಿದ್ದು, ಅಲ್ಲಿನ ಅಧಿಕಾರಿ ನವ್ದೀಪ್ ಸಿಂಗ್ ಸೂರಿ ಕುಟುಂಬಕ್ಕೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಹೇಳಿದ್ದಾರೆ.
ಇನ್ನು ಶ್ರೀದೇವಿಯ ಅವರ ಅಂತಿಮ ಸಂಸ್ಕಾರ ನಾಳೆ ವಿಲೆ ಪಾರ್ಲೆಯ ಪವನ್ ಹಂಸ್ನಲ್ಲಿ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ತಮ್ಮ 4ನೇ ವಯಸ್ಸಿನಲ್ಲೇ ತಮಿಳಿನ ‘ತುನೈವಾನ್’ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದ ಅವರು .13ನೇ ವಯಸ್ಸಿನಲ್ಲಿ ಜೂಲಿ ಚಿತ್ರದೊಂದಿಗೆ ಬಾಲಿವುಡ್ಗೆ ಎಂಟ್ರಿಕೊಟ್ಟದ್ದರು. ಶ್ರೀದೇವಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.