ಮಂಗಳೂರು, ಫೆ 25: ಯುವತಿಯರ ಸರಣಿ ಹಂತಕ ಸೈನೈಡ್ ಮೋಹನ್ಕುಮಾರ್ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿಯ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, 5 ನೇ ಪ್ರಕರಣದಲ್ಲೂ ಜೀವಾವಧಿ ಶಿಕ್ಷೆ ವಿಧಿಸಿದೆ.ಶುಕ್ರವಾರ ಅಂತಿಮ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಡಿ.ಜೆ.ಪುಟ್ಟರಂಗ ಸ್ವಾಮಿ, ಶನಿವಾರ ಶಿಕ್ಷೆಯನ್ನು ಪ್ರಕಟಿಸಿದರು. ಬಂಟ್ವಾಳ ತಾಲೂಕಿನ ಮೇಗಿನ ಮಾಲಾಡಿ ನಿವಾಸಿ ಯಶೋಧ (28) ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವನ ಪರ್ಯಂತ ಶಿಕ್ಷೆ ಮತ್ತು 21,000 ರೂ ದಂಡ ವಿಧಿಸಿ ನ್ಯಾಯಾಲಯ ಫೆ . 24 ರ ಶನಿವಾರ ತೀರ್ಪು ನೀಡಿತು. ವಿಚಾರಣೆ ನಡೆದಿರುವ ಐದು ಪ್ರಕರಣಗಳ ಪೈಕಿ, ನಾಲ್ಕರಲ್ಲಿ ಜೀವಾವಧಿ ಹಾಗೂ ಸುನಂದಾ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಇದನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿದೆ.
ಇನ್ನು ಈ ಪ್ರಕರಣದಲ್ಲಿ ಒಟ್ಟು 39 ಮಂದಿ ಸಾಕ್ಷಿ ಹೇಳಿದ್ದರು. 43 ದಾಖಲೆ ಹಾಗೂ 48 ಪೂರಕ ಸೊತ್ತುಗಳನ್ನು ನ್ಯಾಯಾಲಕ್ಕೆ ಹಾಜರುಪಡಿಸಲಾಗಿತ್ತು. 2009 ರ ಅಕ್ಟೋಬರ್ 21 ರಂದು ನಡೆದಿದ್ದ ವನಿತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2009 ರ ಡಿಸೆಂಬರ್ 29ರಂದು ಸೈನೈಡ್ ಮೋಹನ್ಕುಮಾರ್ನನ್ನು ಬಂಧಿಸಲಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ ಯಶೋಧ ಮೇಲೆಯೂ ಅತ್ಯಾಚಾರ ಎಸಗಿ, ಕೊಲೆ ಮಾಡಿರುವುದಾಗಿ ಮೋಹನ್ಕುಮಾರ್ ಒಪ್ಪಿಕೊಂಡಿದ್ದ. ಒಟ್ಟು 20 ಯುವತಿಯರ ಮೇಲೆ ಅತ್ಯಾಚಾರ ಎಸಗಿ, ಸೈನೈಡ್ ನೀಡಿ ಹತ್ಯೆ ಮಾಡಿರುವ ಆರೋಪ ಮೋಹನ್ಕುಮಾರ್ ಮೇಲಿದೆ. ಈ ಹಿಂದಿನ ಪ್ರಕರಣಗಳಲ್ಲಿ ಮೋಹನ್ ನಿಗೆ ಇದೇ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದ್ದು ಸರ್ಕಾರದ ಪರವಾಗಿ ಸರ್ಕಾರಿ ವಕೀಲ ಜುಡಿತ್ ಕ್ರಾಸ್ತಾ ವಾದಿಸಿದ್ದರು.