ಕುಂದಾಪುರ, ಫೆ 25: ಕೋಟ್ಯಾಂತರ ರುಪಾಯಿ ಬೆಲೆವಾಳುವ ಜೈನ ತೀರ್ಥಂಕರರ ಐದು ಮೂರ್ತಿಗಳನ್ನು ಕುಂದಾಪುರ ಪೊಲೀಸರು ವಶಪಡಿಸಿಕೊಂಡ ಘಟನೆ ತಾಲೂಕಿನ ಕೋಟೇಶ್ವರದ ಕೋಟಿಲಿಂಗೇಶ್ವರ ದೇವಳದ ಬಳಿ ನಡೆದಿದೆ. ಖಚಿತ ಮಾಹಿತಿ ಮೇಲೆ ದಾಳಿನಡೆಸಿದ ಕುಂದಾಪುರ ಪೊಲೀಸರು ವಿಗ್ರಹ ಸಮೇತ ಐವರನ್ನ ಬಂಧಿಸಿದ್ದು, ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ವಿವರ
ಕೋಟೇಶ್ವರದ ಕೋಟಿ ಲಿಂಗೇಶ್ವರ ದೇವಳದ ಬಳಿ ಆರೋಪಿಗಳಾದ ಮಂಗಳೂರಿನ ಪಡೀಲ್ ನಿವಾಸಿ ನೇವಿಲ್ ವಿಲ್ಫಿಮಸ್ಕರೇನಸ್, ಶಿವಮೊಗ್ಗದ ತಾಳಗುಪ್ಪ ನಿವಾಸಿ ಅನಿಲ್ ಫುಟಾರ್ಡೋ, ಮಂಗಳೂರಿನ ಕುಲಶೇಖರ ನಿವಾಸಿ ಆಸ್ಟೀನ್ ಸೀಕ್ವೇರಾ ಸಿಲ್ವರ್ ವರ್ಣದ ಕಾರಿನ ಬಳಿ ನಿಂತುಕೊಂಡು ವ್ಯವಹಾರ ನಡೆಸುತ್ತಿದ್ದು. ಇಲ್ಲೇ ಸ್ವಲ್ಪ ದೂರದಲ್ಲಿ ಕುಂದಾಪುರದ ಚರ್ಚ್ ರೋಡ್ ನಿವಾಸಿ ಜಾನ್ ಹಾಗೂ ಅನಿಲಾ ಸ್ಥಳದಲ್ಲಿದ್ದರು. ಈ ಸಂದರ್ಭ ದಾಳಿ ನಡೆಸಿದ ಕುಂದಾಪುರ ಪಿಎಸ್ಐ ಹರೀಶ್ ಮತ್ತು ಸಿಬ್ಬಂದಿಗಳನ್ನ ಕಂಡ ಅವರು ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಅಲ್ಲಿದ್ದ ಸಿಬ್ಬಂದಿಗಳು ಅವರನ್ನ ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ವಿಚಾರಣೆ ನಡೆಸಿದಾಗ ಸೂಕ್ತ ಉತ್ತರ ಬಾರದೆ ಇದ್ದಾಗ ವಾಹನ ತಪಾಸಣೆ ನಡೆಸಿದ್ದು. ಕಾರಿನಲ್ಲಿ ಸೀಟಿನ ಕೆಳಗೆ ಕಂಚಿನ ನಾಲ್ಕು ಜೈನ ತೀರ್ಥಂಕರರ ಮೂರ್ತಿಗಳು ಪತ್ತೆಯಾಗಿದೆ. ಈ ಮೂರ್ತಿಗಳನ್ನ ಪರೀಶೀಲನೆ ನಡೆಸಿದ ಪೊಲೀಸರು ಇದು ಅಪರೂಪದ ಪ್ರಾಚೀನ ಮೂರ್ತಿಗಳಾಗಿದ್ದು ಬೆಲೆಕಟ್ಟಲಾಗದ ಮೌಲ್ಯವನ್ನ ಹೊಂದಿದೆ ಎಂದು ತಿಳಿದುಬಂದಿದೆ. ಮೂವರು ಆರೋಪಿಗಳು ತಮ್ಮ ತಪ್ಪನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಜಾನ್ ಮತ್ತು ಅನಿಲಾರನ್ನ ಅನುಮಾನದ ಮೇಲೆ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳಿಂದ ಕಾರು, ನಗದು ಮತ್ತು ಮೊಬೈಲ್ ಪೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ.ಕುಂದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.