ಬೆಳಗಾವಿ, ಫೆ 24: ಬಸವಣ್ಣನವರ ನುಡಿದಂತೆ ನಡೆ ವಚನವನ್ನು ನಾವು ಪಾಲಿಸಿದ್ದೇವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಎಂದಾದರೂ ತಾವು ನುಡಿದಂತೆ ನಡೆದಿದ್ದಾರಾ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
ಕರ್ನಾಟಕ ಜನಾಶೀರ್ವಾದ ಯಾತ್ರೆಯ ಎರಡನೇ ಭಾಗವಾಗಿ ಬೆಳಗಾವಿಯ ಅಥಣಿಗೆ ಆಗಮಿಸಿರುವ ರಾಹುಲ್ ಗಾಂಧಿ ಕಳಬೇಡ, ಕೊಲಬೇಡ ಹುಸಿಯ ನುಡಿಯಲು ಬೇಡ ಎಂಬ ಬಸವಣ್ಣನವರ ವಚನಗಳನ್ನು ನೆನಪಿಸಿಕೊಂಡು, ಕಾಂಗ್ರೆಸ್ ಸರ್ಕಾರ ನುಡಿದಂತೆಯೇ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಬಡವರಿಗೆ ಏನು ಭರವಸೆ ನೀಡಿತ್ತೋ ಅದನ್ನು ಮಾಡುತ್ತಿದೆ ಎಂದು ಹೇಳಿದರು.
ಮೋದಿಯವರು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ, 15 ಲಕ್ಷ ಪ್ರತಿಯೊಬ್ಬರಿಗೆ ಕೊಡುತ್ತೇನೆ ಎಂದಿದ್ದರು. ಆದರೆ, ಕೊಡಲಿಲ್ಲ. ಒಂದು ವರ್ಷದಲ್ಲಿ ಭಾರತದಲ್ಲಿರುವ ಎಲ್ಲಾ ಬಡವರ ಖಾತೆಗೆ ಹದಿನೈದು ಲಕ್ಷ ತಂದು ಹಾಕುತ್ತೇನೆ ಎಂದರು. ಆದರೆ ಆ ಕೆಲಸವನ್ನು ಕೂಡ ಮಾಡಿಲ್ಲ. ಮೋದಿ ಜನರಿಗೆ ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ದೂರಿದರು.
20 ಲಕ್ಷ ಬಡವರಿಗೆ ಉದ್ಯೋಗ ನೀಡುವುದಾಗಿ ಹೇಳಿದರು. ಆದರೆ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿಲ್ಲ. ನೀರವ್ ಮೋದಿಯಂಥವರು ದೇಶವನ್ನು ಕೊಳ್ಳೆಹೊಡೆದು ಹೋಗುತ್ತಿದ್ದಾರೆ ಎಂದು ಛಾಟಿ ಬೀಸಿದರು .