ಮಂಗಳೂರು, ಫೆ.24: ಹಸಿವು ಮುಕ್ತ ರಾಜ್ಯದ ಗುರಿ ದೇಶಕ್ಕೆ ಮಾದರಿ ಎಂದು ಸಂಸದ ಆಸ್ಕರ್ ಫೆರ್ನಾಂಡೀಸ್ ತಿಳಿಸಿದ್ದಾರೆ.
ಕುಲಶೇಖರದ ಕೊರ್ಡೆಲ್ ಸಭಾಂಗಣದಲ್ಲಿ ಸಂಸದ ಆಸ್ಕರ್ ಫೆರ್ನಾಂಡೀಸ್ ಅವರು ಕೇಂದ್ರ - ರಾಜ್ಯ ಸರಕಾರ ಹಾಗೂ ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಸಹಯೋಗದೊಂದಿಗೆ ರಾಜೀವ ಗಾಂಧಿ ನಗರದಲ್ಲಿ ನಿರ್ಮಿಸಲಾಗುವ ಜಿ+3 ಮಾದರಿಯ ವಸತಿ ಸಂಕೀರ್ಣದ ಶಿಲಾನ್ಯಾಸವನ್ನು ಸಾಂಕೇತಿಕವಾಗಿ ನೆರವೇರಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಹಸಿವು ಮುಕ್ತ ರಾಜ್ಯದ ಗುರಿ ದೇಶಕ್ಕೆ ಮಾದರಿ. ಈ ರೀತಿ ಜನರು ಹಸಿವಿನಿಂದ ಸಾಯಬಾರದು ಎನ್ನುವ ಕಾರ್ಯಕ್ರಮ ದೇಶದ ಬೇರೆ ಕಡೆ ಕಾಣಲು ಸಾಧ್ಯವಿಲ್ಲ ಎಂದು ಆಸ್ಕರ್ ಫೆರ್ನಾಂಡೀಸ್ ತಿಳಿಸಿದ್ದಾರೆ.
ಸಮಾರಂಭದಲ್ಲಿ ಶಾಸಕ ಜೆ.ಆರ್.ಲೋಬೊ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದೆಯೂ ಮನೆ ಇಲ್ಲದವರಿಗೆ 2 ಸಾವಿರ ಮನೆ ನಿರ್ಮಾಣದ ಗುರಿ ಇದೆ. ಈ ಯೋಜನೆಯಲ್ಲಿ 930 ಫ್ಲಾಟ್ ಗಳ 70 ಕೋಟಿ ರೂ. ಯೋಜನೆ 18 ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭ ಮನಪಾ ಮೇಯರ್ ಕವಿತಾ ಸನಿಲ್, ಉಪ ಮೇಯರ್ ರಜನೀಶ್ , ಮೂಡ ಅಧ್ಯಕ್ಷ ಸುರೇಶ್ ಬಲ್ಲಾಳ್, ಮೊದಲಾದವರು ಉಪಸ್ಥಿತರಿದ್ದರು.