ಸುಳ್ಯ, ಫೆ 23: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಫೆ. 20 ರಂದು ಪದವಿ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಸಹಪಾಠಿಯೇ ಚೂರಿಯಿಂದ ಇರಿದು ಕೊಲೆ ಮಾಡಿದ್ದು. ಈ ಕೊಲೆಗೆ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಕಳೆದ ನಾಲ್ಕು ತಿಂಗಳಿನಿಂದ ಅಕ್ಷತಾಳನ್ನು ಪ್ರೀತಿಸುತ್ತಿದ್ದ ಕಾರ್ತಿಕ್ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಆಕೆಯನ್ನು ಒತ್ತಾಯ ಮಾಡುತ್ತಿದ್ದ. ವಾಟ್ಸಪ್ ಮೂಲಕ 200ಕ್ಕೂ ಅಧಿಕ ಸಂದೇಶ ಕಳುಹಿಸಿದ್ದ. ಒಂದು ವೇಳೆ ಪ್ರೀತಿಯನ್ನು ಒಪ್ಪದಿದ್ದಲ್ಲಿ ಕೊಲೆ ಮಾಡುವ ಬೆದರಿಕೆ ಹಾಕಿದ್ದ. ಈ ಬಗ್ಗೆ ಕಾರ್ತಿಕ್ ಗೆಳೆಯರ ಬಳಿ ಹೇಳಿಕೊಂಡಿದ್ದ ಎನ್ನುವ ಮಾಹಿತಿ ಲಭಿಸಿದೆ.
ಕಾರ್ತಿಕ್ ಪ್ರೀತಿಯನ್ನು ಅಕ್ಷತಾ ನಿರಾಕರಿಸಿದ್ದು ಈ ಕೊಲೆಗೆ ಕಾರಣವಾಗಿದೆ. ಫೆ 14 ಪ್ರೇಮಿಗಳ ದಿನಾಚರಣೆಯಂದು ಅಕ್ಷಾತಳನ್ನು ಪ್ರೀತಿಸುವುದಾಗಿ ಆಕೆಗೆ ಸಂದೇಶ ಕಳುಹಿಸಿದ್ದ. ಪ್ರೀತಿಸದಿದ್ದರೆ ಕೊಲ್ಲುವೆ ಎಂದು ಅಕ್ಷತಾ ಬಳಿ ಹೇಳಿದ್ದ. ಆದರೆ ಅಕ್ಷತಾ ಕಾರ್ತಿಕ್ ಪ್ರೀತಿಯನ್ನು ನಿರಾಕರಿಸಿದ್ದಳು. ಹೀಗಾಗಿ ಫೆ. 20 ಮಂಗಳವಾರ ಬೆಳಗ್ಗಿನಿಂದಲೇ ಕಾರ್ತಿಕ್ ಕೊಲೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದ. ಮಧ್ಯಾಹ್ನ ರಥಬೀದಿಯ ಅಂಗಡಿಯಿಂದ 30 ರೂ. ಕೊಟ್ಟು ಚಾಕು ಖರೀದಿಸಿ ಅದನ್ನು ಚೂಪು ಮಾಡಿಸಿದ್ದ. ನಂತರ ಕಾಲೇಜಿಗೆ ಬಂದಿದ್ದ ಈತ ತರಗತಿಯಲ್ಲಿಯೇ ಆಕೆಗೆ ಇರಿಯಲು ಸಂಚು ರೂಪಿಸಿದ್ದ. ಆದರೆ ಅದು ಸಾಧ್ಯವಾಗಿರಲಿಲ್ಲ. ಸಂಜೆ ಆಕೆ ಕಾಲೇಜಿನಿಂದ ಬೇಗನೆ ಹೊರಟುದನ್ನು ಗಮನಿಸಿ ಆಕೆಗಿಂತ ಮೊದಲೇ ತೆರಳಿ ದಾರಿಯಲ್ಲೇ ಆಕೆಯನ್ನು ಕಾರ್ತಿಕ್ ಕೊಲೆ ಮಾಡಿದ್ದಾನೆ.