ಕಾಸರಗೋಡು,ಫೆ 22: ಚೀಮೇನಿ ಪುಲಿಯನ್ನೂರಿನಲ್ಲಿ ನಿವೃತ್ತ ಶಿಕ್ಷಕಿ ಜಾನಕಿ (65) ರವರನ್ನು ದರೋಡೆ ಸಂದರ್ಭದಲ್ಲಿ ಕೊಲೆಗೈದ ಘಟನೆಗೆ ಸಂಬಂಧಪಟ್ಟಂತೆ ಇಬ್ಬರನ್ನು ತನಿಖಾ ತಂಡ ಬಂಧಿಸಿದೆ. ಸೂತ್ರಧಾರ ನಾಗಿರುವ ಇನ್ನೋರ್ವ ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದಾನೆ. ಬಂಧಿತರನ್ನು ಪುಲಿಯನ್ನೂರು ಚಿರಿಕ್ಕುಳದ ರಿನೇಶ್ ( 27 ) ಮತ್ತು ವಿಶಾಖ್ (28) ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ಅರುಣ್ ( 28) ವಿದೇಶಕ್ಕೆ ಪರಾರಿಯಾಗಿದ್ದಾನೆ. 2017 ರ ಡಿಸೆ೦ಬರ್ 13 ರಂದು ದಾರುಣ ಘಟನೆ ನಡೆದಿತ್ತು . ರಾತ್ರಿ 10 ಗಂಟೆ ಸುಮಾರಿಗೆ ಮುಸಕುಧಾರಿಗಳಾಗಿ ಮನೆಗೆ ನುಗ್ಗಿದ ಮೂವರು ಮಾರಕಾಸ್ತ್ರದಿಂದ ಬೆದರಿಸಿದ್ದು , ಕಪಾಟಿನ ಕೀಲಿ ಕೈ ಕೇಳಿದ್ದರು. ನೀಡಲು ನಿರಾಕರಿಸಿದಾಗ ಜಾನಕಿಯ ಮಾರಾಕಾಸ್ತ್ರದಿಂದ ಕುತ್ತಿಗೆ ಕಡಿದು ಕೊಲೆಗೈದಿದ್ದು , ತಡೆಯಲೆತ್ನಿಸಿದಾಗ ಪತಿ, ನಿವೃತ್ತ ಮುಖ್ಯೋಪಾಧ್ಯಾಯ ಕೃಷ್ಣನ್ ರವರ ಕತ್ತು ಹಿಸುಕಿ ಮಾರಾಕಾಸ್ತ್ರದಿಂದ ಕಡಿದು ಕಪಾಟಿನಲ್ಲಿದ್ದ ೨೩ ಪವನ್ ಚಿನ್ನಾಭರಣ, 35 ಸಾವಿರ ರೂ . ನಗದು , ಮೊಬೈಲ್ ನನ್ನು ದರೋಡೆ ನಡೆಸಿ ಪರಾರಿಯಾಗಿದ್ದರು.
ಒಂದು ಗಂಟೆಗೂ ಅಧಿಕ ಸಮಯ ಪ್ರಜ್ಞೆ ತಪ್ಪಿ ಬಿದ್ದಿದ್ದ ಕೃಷ್ಣನ್ ರವರು ಚೀಮೇನಿ ಪೊಲೀಸರು ಮತ್ತು ಸಂಬಂಧಿಕರಿಗೆ ಮಾಹಿತಿ ನೀಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ರಾತ್ರಿಯೇ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದು , ತನಿಖೆಯನ್ನು ಕೇರಳ ಮಾತ್ರವಲ್ಲ ಹೊರರಾಜ್ಯಗಳಿಗೂ ವಿಸ್ತರಿಸಿತ್ತು. ಮಹಾರಾಷ್ಟ್ರ ಕೇಂದ್ರೀಕರಿಸಿ ತನಿಖೆ ನಡೆಸಲಾಗಿತ್ತು. ಕೃತ್ಯ ನಡೆದ ದಿನ ಹಣ್ಣು ಹಂಪಲು ಸಾಗಾಟ ಮಾಡಿದ ಮಹಾರಾಷ್ಟ್ರದ ಪಿಕಪ್ ವ್ಯಾನ್ ಬೆನ್ನತ್ತಿ ಪೊಲೀಸರು ತನಿಖೆ ನಡೆಸಿದ್ದರು . ಹೊರರಾಜ್ಯದವರೇ ಕೃತ್ಯ ನಡೆಸಿರುವ ಬಗ್ಗೆ ಸಂಶಯ ತಲೆದೋರಿತ್ತು . ಆದರೆ ಹಲವು ಮಜಲುಗಳ ಮೂಲಕ ತನಿಖೆ ನಡೆಸಿದರೂ ಯಾವುದೇ ಸುಳಿವು ಲಭಿಸಲಿಲ್ಲ . ಪೊಲೀಸರಿಗೆ ಸವಾಲಾದ ಈ ಪ್ರಕರಣದ ಆರೋಪಿಗಳ ಬಂಧನ ವಿಳಂಬಗೊಂಡ ಹಿನ್ನಲೆಯಲ್ಲಿ ಕಾಂಗ್ರೆಸ್ , ಬಿಜೆಪಿ , ಕ್ರಿಯಾಸಮಿತಿ ಹಾಗೂ ಇನ್ನಿತರ ಪಕ್ಷ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು . ಆದರೆ ದರೋಡೆಕೋರರು ಸುತ್ತಮುತ್ತ ಇರುವ ಬಗ್ಗೆ ಸುಳಿವು ಲಭಿಸಲು ಎರಡು ತಿಂಗಳು ಬೇಕಾಯಿತು . ಕೊನೆಗೂ ಆರೋಪಿಗಳ ಬಂಧನವಾಗುವುದರೊಂದಿಗೆ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ
ಶಿಷ್ಯರಿಂದಲೇ ಕೊಲೆ
ಆರೋಪಿಗಳಾದ ರಿನಿಷ್ ಮತ್ತು ವಿಶಾಖ್ ಇಬ್ಬರೂ ಜಾನಕಿ ಟೀಚರ್ ರವರ ಶಿಷ್ಯರು. ಪುಲಿಯನ್ನೂರು ಸರಕಾರಿ ಎಲ್ . ಪಿ ಶಾಲೆಯಲ್ಲಿ ಇಬ್ಬರೂ ಜಾನಕಿ ಟೀಚರ್ ರವರಿಂದ ಶಿಕ್ಷಣ ಪಡೆದಿದ್ದರು.
ಗಲ್ಫ್ ನಿಂದ ರಜೆಯಲ್ಲಿ ಊರಿಗೆ ಬಂದಿದ್ದ ಅರುಣ್ ಜೊತೆ ಸ್ನೇಹ ಬೆಳೆಸಿಕೊಂಡ ರಿನಿಷ್ ಮತ್ತು ವಿಶಾಖ್ ಕಳವಿಗೆ ಸಂಚು ರೂಪಿಸಿದ್ದರು. ಮನೆಯಿಂದ ೧೮ ಪವನ್ ಚಿನ್ನಾಭರಣ ಮತ್ತು 18 ಪವನ್ ಚಿನ್ನಾಭರಣ ದರೋಡೆ ಮಾಡಿದ್ದರು. ಈ ಪೈಕಿ ಅರುಣ್ ಸೂತ್ರಧಾರನಾಗಿದ್ದು , ಕೃತ್ಯ ನಡೆಸಿದ ಬಳಿಕ ಚಿನ್ನಾಭರಣ ಮಾರಾಟ ಮಾಡಿ ಲಭಿಸಿದ ಹಣ ಸಹಿತ ಈತ ಗಲ್ಫ್ ಗೆ ಪರಾರಿಯಾಗಿದ್ದನು .
ಕಣ್ಣೂರು ಮತ್ತು ಮಂಗಳೂರಿನಲ್ಲಿ ಚಿನ್ನಾಭರಣ
ಕಣ್ಣೂರಿನಲ್ಲಿ ಚಿನ್ನಾಭರಣ ಮಾರಾಟ ಮಾಡಿ 1.20 ಲಕ್ಷ ರೂ , ಮಂಗಳೂರಿನ ಜ್ಯೂವೆಲ್ಲರಿಯೊಂದರಲ್ಲಿ ಚಿನ್ನಾಭರಣ ಮಾರಾಟ ಮಾಡಿ 1.30 ಲಕ್ಷ ರೂ . ಲಭಿಸಿತ್ತು. ಆರೋಪಿಗಳಲ್ಲಿ ಒಬ್ಬರಾದ ವಿಶಾಖ್ ನ ಚಲನವಲನ ಹಾಗೂ ಭಾರೀ ಮೊತ್ತದ ಹಣವನ್ನು ಮನೆಯಲ್ಲಿ ತಂದಿರಿಸಿದ್ದ ಬಗ್ಗೆ ತಂದೆಗೆ ಬಂದ ಸಂಶಯ ಕೃತ್ಯದ ಹಿಂದಿನ ರಹಸ್ಯ ಬೆಳಕಿಗೆ ಬರಲು ಕಾರಣವಾಯಿತು.
ಕಳವು ಗೈದ ಚಿನ್ನಾಭರಣವನ್ನು ಮನೆ ಸಮೀಪ ಕೆಲ ದಿನಗಳ ಕಾಲ ಹೂತು ಹಾಕಲಾಗಿತ್ತು. ಬಳಿಕ ಮಂಗಳೂರು, ಕಣ್ಣೂರು ಮೊದಲಾದೆಡೆ ಗಳಲ್ಲಿನ ನಾಲ್ಕು ಜುವೆಲ್ಲರಿಗಳಲ್ಲಿ ಮಾರಾಟ ಮಾಡಿದ್ದರು . ಚಿನ್ನಾಭರಣ ಮಾರಾಟದಿಂದ ಲಭಿಸಿದ ಹಣವನ್ನು ವಿಶಾಖ್ ಮನೆಯಲ್ಲಿ ತಂದಿರಿಸಿದ್ದು , ತಂದೆಯ ಗಮನಕ್ಕೆ ಬಂದಿತ್ತು.
ಇದರಿಂದ ಸಂಶಯಗೊಂಡು ತಂದೆ ಪೊಲೀಸರಿಗೆ ಸುಳಿವು ನೀಡಿದ್ದರು. ಈ ಸುಳಿವಿನಂತೆ ತನಿಖೆ ನಡೆಸಿದ ಪೊಲೀಸರಿಗೆ ಸವಾಲಾಗಿದ್ದ ಈ ಪ್ರಕರಣ ಬೇಧಿಸುವ ಮೂಲಕ ನಿಟ್ಟುಸಿರು ಬಿಟ್ಟರು.
ಗುರುತು ಪತ್ತೆ ಯಾದುದೇ ಕೊಲೆಗೆ ಕಾರಣ !
ಆರೋಪಿಗಳು ದರೋಡೆ ನಡೆಸುವ ಉದ್ದೇಶದಿಂದ ಮನೆಗೆ ನುಗ್ಗಿದ್ದರು. ಮುಸಕುಧಾರಿಗಳಾಗಿ ತೆರಳಿದ್ದ ಮೂವರ ಪೈಕಿ ಇಬ್ಬರ ಧ್ವನಿಯಿಂದ ಜಾನಕಿಯಮ್ಮ ಗುರುತು ಪತ್ತೆಹಚ್ಚಿದ್ದರು. ಇದರಿಂದ ತಾವು ಸಿಲುಕಬಹುದು ಎಂಬ ಕಾರಣಕ್ಕೆ ಜಾನಕಿ ಟೀಚರನ್ನು ಕೊಲೆಗೈಯ್ಯಲು ಕಾರಣ ಎಂದು ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ ಆರೋಪಿಗಳ ಪೈಕಿ ವಿಶಾಖ್ ಮೆಕ್ಯಾನಿಕ್ ಆಗಿದ್ದು , ರಿನಿಷ್ ಕೂಲಿ ಕೆಲಸಕ್ಕೆ ತೆರಳುತ್ತಿದ್ದನು. ಬಹರೈನ್ ನಲ್ಲಿ ಉದ್ಯೋಗದಲ್ಲಿರುವ ಇನ್ನೋರ್ವ ಆರೋಪಿ ಅರುಣ್ ಒಂದು ತಿಂಗಳ ರಜೆಯಲ್ಲಿ ಊರಿಗೆ ಬಂದಿದ್ದನು .ಅಂದು ರಾತ್ರಿ ಸಮೀಪದ ದೇವಸ್ಥಾನವೊಂದರಲ್ಲಿ ನಡೆಯುತ್ತಿದ್ದ ಉತ್ಸವಕ್ಕೆ ತೆರಳಿ ಮರಳುತ್ತಿದ್ದಾಗ ಮೂವರು ಜಾನಕಿ ಟೀಚರ್ ಮನೆಗೆ ನುಗ್ಗಿ ಕೃತ್ಯ ನಡೆಸಿದ್ದರು. ಕೃತ್ಯಕ್ಕೆ ಬಳಸಿದ್ದ ಮಾರಾಕಾಸ್ತ್ರವನ್ನು ಚೀಮೇನಿ ಹೊಳೆಗೆ ಎಸೆದಿರುವುದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ.