ಮುಂಬೈ, ಫೆ 22 : ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಜ್ರ ಉದ್ಯಮಿ ನೀರವ್ ಮೋದಿ ಅವರ ಐಶಾರಾಮಿ ಕಾರುಗಳನ್ನು ಕೂಡ ಜಪ್ತಿ ಮಾಡಲಾಗಿದ್ದು, ನೀರವ್ ಮೋದಿಯ ರೋಲ್ಸ್ ರಾಯ್ಸ್ ಘೋಸ್ಚ್ ಕಾರು ಸೇರಿದಂತೆ ಒಟ್ಟು 9 ಕಾರುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಅಧಿಕಾರಿಗಳು ಜಪ್ತಿ ಮಾಡಿರುವ ಕಾರುಗಳ ಪೈಕಿ 2 ಮರ್ಸಿಡೀಸ್ ಬೆಂಜ್ ಜಿಎಲ್ 350 ಸಿಡಿಐ, ರೋಲ್ಸ್ ರಾಯ್ಸ್ ಘೋಸ್ಚ್, ಫಾರ್ಷ್ ಪನಮೆರಾ, ಮೂರು ಹೋಂಡಾ ಕಾರುಗಳು, ಟೋಯೋಟಾ ಫಾರ್ಚುನರ್ ಮತ್ತು ಟೋಯೊಟಾ ಇನ್ನೋವಾ ಕಾರುಗಳನ್ನು ಆಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇವಿಷ್ಟೇ ಅಲ್ಲದೆ ನೀರವ್ ಗೆ ಸೇರಿದ ಸುಮಾರು 7.80 ಕೋಟಿ ಮೌಲ್ಯದ ಮ್ಯೂಚುವಲ್ ಫಂಡ್ಸ್ ಮತ್ತು ಷೇರುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇನ್ನೊಂದೆಡೆ ಮುಂಬೈ ಬಳಿಯ ಅಲಿಬಾಗ್ನಲ್ಲಿರುವ ನೀರವ್ ಮೋದಿಯ 32 ಕೋಟಿ ವೆಚ್ಚದ ಐಷಾರಾಮಿ ತೋಟದ ಮನೆಯನ್ನು ಸಿಬಿಐ ಅಧಿಕಾರಿಗಳು ಬುಧವಾರ ಬೀಗ ಜಡಿದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯ ಬಂಧಿತ ನಾಲ್ವರ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ.