ಮುಂಬೈ, ಫೆ 21: ವಜ್ರ ವ್ಯಾಪಾರಿ ನೀರವ್ ಮೋದಿ ತಲೆಮರೆಸಿಕೊಂಡಿಲ್ಲ, ತಮ್ಮ ವ್ಯಾಪಾರ ವಹಿವಾಟು ಗೆ ಸಂಬಂಧಿಸಿ ವಿದೇಶಕ್ಕೆ ಹೋಗಿದ್ದಾರೆ ಅಷ್ಟೇ ಎಂದು ನೀರವ್ ಮೋದಿ ಪರ ವಕೀಲ ವಿಜಯ್ ಅಗರ್ವಾಲ್ ಅವರು ಫೆ 21 ರ ಬುಧವಾರ ಹೇಳಿದ್ದಾರೆ. ಬಹುಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನೀರವ್ ಮೋದಿ ನೀವಂದುಕೊಂಡಂತೆ ತಲೆ ಮರೆಸಿಕೊಂಡಿಲ್ಲ, ತಮ್ಮ ವ್ಯಾಪಾರದ ಉದ್ದೇಶದಿಂದ ವಿದೇಶಕ್ಕೆ ತೆರಳಿದ್ದಾರೆಂದು ತಿಳಿಸಿದ್ದಾರೆ. ನೀರವ್ ಮೋದಿ ಒಬ್ಬ ಅಂತರಾಷ್ಟ್ರೀಯ ಮಟ್ಟದ ಉದ್ಯಮಿ, ಹೀಗಾಗಿ ವಿದೇಶಗಳಿಗೆ ಹೋಗುವುದು ಸಾಮಾನ್ಯ ಆದರೆ ಅವರು ತಲೆಮರೆಸಿಕೊಂಡಿರುತ್ತಾರೆ ಅನ್ನೋದು ಮಾದ್ಯಮದ ಅಲೋಚನೆಯಷ್ಟೇ ಎಂದು ಹೇಳಿದ್ದಾರೆ. ಭಾರತದಲ್ಲಿ ನೀರವ್ ಮೋದಿ ಆಸ್ತಿ ರೂ.5,000 ಕೋಟಿಯಷ್ಟಿರುವಾಗ ನೀರವ್ ಮೋದಿ ಏಕೆ ದೇಶ ಬಿಟ್ಟು ಓಡಿ ಹೋಗುತ್ತಾರೆ. ಸಿಬಿಐ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಪ್ರಕರಣದ ಎಲ್ಲಾ ವಿಚಾರಗಳು ಬಹಿರಂಗಗೊಳ್ಳಲಿದೆ. ಬ್ಯಾಂಕ್ ಕೋಟ್ಯಾಂತರ ರೂಪಾಯಿ ಕಮಿಷನ್ ಪಡೆದು ಇದೀಗ ಅದನ್ನು ವಾಣಿಜ್ಯ ವಹಿವಾಟನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಎಂದು ಹೇಳುತ್ತಿದೆ ಎಂದು ಕಿಡಿಕಾರಿದರು.