ಉಡುಪಿ, ಫೆ 21: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರಾವಳಿ ಪ್ರವಾಸ ಇಂದು ಮೂರನೇ ದಿನವನ್ನು ಪೂರೈಸಿದ್ದು, ಶ್ರೀ ಕೃಷ್ಣ ಮಠ ಉಡುಪಿಗೆ ಭೇಟಿ ನೀಡಿದ್ದಾರೆ.
ಪಲಿಮಾರು ಮಠದ ಛತ್ರ ರಾಮಧಾಮವನ್ನು ಉದ್ಘಾಟಿಸಿದ ಅವರು, ನಂತರ ಕೃಷ್ಣ ಮಠಕ್ಕೆ ತೆರಳಿ ಶ್ರೀ ಕೃಷ್ಣನ ದರ್ಶನ ಪಡೆದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗ್ಗೆಯೇ ಉಡುಪಿ ಶ್ರೀ ಕೃಷ್ಣ ದೇವರ ದರ್ಶನ ಸಿಕ್ಕಿದ್ದು ನನಗೆ ಸಂತೃಪ್ತಿಯಾಗಿದೆ. ಅದರಲ್ಲೂ ಶ್ರೀ ಕೃಷ್ಣನ ದರ್ಶನ ಮಾಡಿ ನಾನು ಧನ್ಯನಾದೆ. ಮಾತ್ರವಲ್ಲ, ಪರ್ಯಾಯ ಪೀಠಾಧಿಪತಿ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯ ಭೇಟಿಯೂ ಮನಸ್ಸಿಗೆ ಖುಷಿಯಾಗಿದೆ ಎಂದು ಹೇಳಿದರು.
ಈ ಸಂದರ್ಭ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂತೋಷ್, ಶೋಭಾ ಕರಂದ್ಲಾಜೆ, ಮುರಳೀಧರ್ ರಾವ್ ಮತ್ತಿತರರು ಉಪಸ್ಥಿತರಿದ್ದರು.