ಮಂಜೇಶ್ವರ, ಫೆ 21 : ದುಷ್ಕರ್ಮಿಗಳ ತಂಡವೊಂದು ಮೂವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಫೆ.20ರ ಮಂಗಳವಾರ ರಾತ್ರಿ ಮಂಜೇಶ್ವರ ಹೊಸಂಗಡಿ ಜಂಕ್ಷನ್ ನಲ್ಲಿ ನಡೆದಿದೆ.ಘಟನೆಯಲ್ಲಿ ಹೊಸಂಗಡಿ ಯ ನಝೀರ್ (37), ಪೋಸೋಟ್ ನ ಆತಿಫ್ (20) ಮತ್ತು ಮಂಜೇಶ್ವರ ಗಾಂಧಿನಗರ ದ ಮುಹಮ್ಮದ್ ಅಶ್ರಫ್ (33) ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಝೀರ್ ಅವರು ಹೊಸಂಗಡಿಯಲ್ಲಿ ಜ್ಯೂಸ್ ಅಂಗಡಿ ಹೊಂದಿದ್ದು, ಅಲ್ಲಿ ಆತಿಫ್ ಕೆಲಸ ಮಾಡುತ್ತಿದ್ದ. ರಾತ್ರಿ 10 ಗಂಟೆ ಸುಮಾರಿಗೆ ಅಂಗಡಿ ಬಂದ್ ಮಾಡುವ ಸಂದರ್ಭ 5 ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ ತಂಡ ಅವರ ಮೇಲೆ ತಲವಾರು ದಾಳಿ ನಡೆಸಿದೆ. ಈ ಸಂದರ್ಭ ಅಂಗಡಿಗೆ ಜ್ಯೂಸ್ ಕುಡಿಯಲು ಬಂದಿದ್ದ ಅಶ್ರಫ್ ಮೇಲೂ ಗುಂಪು ತಲವಾರು ದಾಳಿ ನಡೆಸಿದೆ. ಘಟನೆಯಲ್ಲಿ ಆತಿಫ್ ರಿಗೆ ಕುತ್ತಿಗೆಗೆ ಹಲ್ಲೆ ಮಾಡುವ ಸಂದರ್ಭ ಅವರು ತಡೆಯಲೆತ್ನಿಸಿದಾಗ ಕೈಗೆ ತಲವಾರು ದಾಳಿಯಾಗಿದೆ. ನಝೀರ್ ರಿಗೆ ಕುತ್ತಿಗೆಗೆ ಏಟು, ಅಶ್ರಫ್ ರಿಗೆ ತಲೆಗೆ ಗಾಯವಾಗಿದೆ. ದಾಳಿ ನಡೆಸಿದವರು ಗಾಂಜಾ ವ್ಯಸನಿಗಳು ಮತ್ತು ಗಾಂಜಾ ವ್ಯವಹಾರ ನಡೆಸುತ್ತಿದ್ದವರು ಎಂದು ಆರೋಪಿಸಲಾಗಿದೆ.
ಇದೇ ಗಾಂಜಾ ವ್ಯವಹಾರದ ಬಗ್ಗೆ ಕೆಲವು ಸ್ಥಳೀಯ ಯುವಕರು ಮಂಜೇಶ್ವರ ಠಾಣೆಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿದೆ ಎಂದು ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ನಝೀರ್ ದೂರಿದ್ದಾರೆ.
ಮಂಜೇಶ್ವರ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿರುವುದಾಗಿ ಆರೋಪಿಗಳಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.