ಬೆಂಗಳೂರು, ಫೆ 21: ಅಡಿಕೆಯನ್ನು ನಿಷೇಧಿಸದಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಪ್ರಸ್ತಾವ ಕಳುಹಿಸುತ್ತೇವೆ ಅಲ್ಲದೆ ಶೀಘ್ರದಲ್ಲೇ ಅಡಿಕೆ ಬೆಳೆಗಾರರ ಮಂಡಳಿ ರಚಿಸುತ್ತೇವೆ ಎಂದು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದ್ದಾರೆ. ಮಂಗಳವಾರ ವಿಧಾನ ಪರಿಷತ್ನ ಶೂನ್ಯ ವೇಳೆಯಲ್ಲಿ ಆಡಳಿತ ಪಕ್ಷದ ಮುಖ್ಯ ಸಚೇತಕ ಐವನ್ ಡಿಸೋಜಾ ಪ್ರಸ್ತಾಪಿಸಿದ ವಿಷಯಕ್ಕೆ ಅವರು ಉತ್ತರಿಸಿ ಈ ಮೇಲಿನ ಹೇಳಿಕೆ ನೀಡಿದ್ದಾರೆ. ಈ ಹಿಂದೆಯೇ ನಾವು ಕೇಂದ್ರ ಸರ್ಕಾರಕ್ಕೆ ಅಡಿಕೆ ನಿಷೇಧಿಸದಂತೆ ಮೂರ್ನಾಲ್ಕು ಬಾರಿ ಶಿಫಾರಸು ಮಾಡಿದ್ದೇವೆ. ಪ್ರಯೋಗಾಲಯದಿಂದ ಮತ್ತೊಮ್ಮೆ ವರದಿ ಪಡೆದು ಪರಿಶೀಲಿಸುವುದಾಗಿ ಕೇಂದ್ರ ಹೇಳಿದೆ. ತೋಟಗಾರಿಕೆ ವಿವಿ ವರದಿ ಪಡೆದು ಮತ್ತೊಮ್ಮೆ ಕೇಂದ್ರಕ್ಕೆ ಕಳುಹಿಸುತ್ತೇವೆ’ ಎಂದರು.ಇದಕ್ಕೂ ಮುಂಚೆ ಮಾತನಾಡಿದ ಐವಾನ್ ಡಿಸೋಜಾ, ಅಡಿಕೆ ನಿಷೇಧದ ಭೀತಿ, ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಅಧಿಕಾರಿಗಳು ನೀಡಿದ ತಪ್ಪು ಮಾಹಿತಿಯನ್ನೇ ನಂಬಿದ ಕೇಂದ್ರ ಸರ್ಕಾರ ಎರಡು ತಿಂಗಳ ಹಿಂದೆಯೇ ನಿಷೇಧಿಸುವ ಬಗ್ಗೆ ಪ್ರಸ್ತಾಪಿಸಿದ್ದರೂ ಬೆಳೆಗಾರರ ಬೆನ್ನಿಗೆ ನಿಲ್ಲಬೇಕಾದ ರಾಜ್ಯದ ಸಂಸದರು ಮೌನವಹಿಸಿರುವುದು ಅಶ್ಚರ್ಯ ಹುಟ್ಟಿಸಿದೆ ಎಂದರು.