ಬೆಂಗಳೂರು, ಫೆ 20: ವೀರ ಕ್ರೀಡೆ ಕಂಬಳಕ್ಕೆ ಈಗ ಕಾನೂನಿನ ಮಾನ್ಯತೆ ಸಿಕ್ಕಿದೆ, ಗ್ರಾಮೀಣ ಕ್ರೀಡೆ ಬೆಂಬಲಿಸಿ ಎಂದು ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಅವರು ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ ಕಂಬಳ, ತಮಿಳುನಾಡಿನ ಜಲ್ಲಿ ಕಟ್ಟು, ಆಂಧ್ರಪ್ರದೇಶ ಎತ್ತಿನ ಓಟ ಸೇರಿದಂತೆ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕು ಎಂದು ಸೆಹ್ವಾಗ್ ಹೇಳಿದ್ದಾರೆ. ಸೆಹ್ವಾಗ್ ಟ್ವೀಟ್ ಗೆ ಕರಾವಳಿಯ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ.
ಸೆಹ್ವಾಗ್ ಅವರ ಟ್ವೀಟ್ ನಿಂದ ಕಂಬಳ ಪ್ರಿಯರಿಗೆ ಸಂತಸವಾಗಿದೆ. ಸುಪ್ರೀಂ ಕೋರ್ಟ್ನಲ್ಲಿ ಕಂಬಳದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಸ್ವಯಂ ಸೇವಾ ಸಂಘಟನೆ ಪೆಟಾ ಇಂಡಿಯಾ, ಕಂಬಳ ಕ್ರೀಡೆಯಲ್ಲಿ ಭಾಗವಹಿಸುವ ಕೋಣಗಳನ್ನು ಹಿಂಸಿಸಲಾಗುತ್ತದೆ ಎಂದು ವಾದಿಸಿತ್ತು. ಇದೀಗ ಜಾನಪದ ಕ್ರೀಡೆ ಕಂಬಳಕ್ಕೆ ರಾಷ್ಟ್ರಪತಿಗಳ ಅಂಕಿತ ಸಿಕ್ಕಿದೆ. ರಾಜ್ಯಪಾಲ ವಜುಭಾಯಿ ವಾಲಾ ಕಳಿಸಿದ್ದ ತಿದ್ದುಪಡಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಮಾಡಿದ್ದು, ಕಂಬಳಕ್ಕೆ ಇದ್ದ ಅಡ್ಡಿ ದೂರವಾಗಿದೆ.