ಉಳ್ಳಾಲ, ಸೆ18: ರಾಜ್ಯದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾದ ಯು.ಟಿ ಖಾದರ್ ಬಗ್ಗೆ ಯಾರಿಗ್ ತಾನೆ ಗೊತ್ತಿಲ್ಲ ಹೇಳಿ. ಜನಪರ, ಸಮಾಜಮುಖಿ ಚಟುವಟಿಕೆಗಳಲ್ಲಿ ಸದಾ ಮುಂದೆ ಇರುವ ಇವರು ಎಲ್ಲರ ಮೆಚ್ಚುಗೆ ಪಡೆದಿರುವ ರಾಜಕಾರಣಿ. ಈ ಹಿಂದೆ ಯುಟಿ ಖಾದರ್ ಟ್ರಾಫಿಕ್ ನಿರ್ವಹಿಸಿ, ಬಸ್ಸನ್ನು ಚಲಾಯಿಸಿ ಸುದ್ದಿಯುಲ್ಲಿದ್ದರು. ಅನೇಕ ಸಮಾಜ ಸೇವೆಗಳಲ್ಲಿ ತೊಡಗಿಸಿ ಎಲ್ಲರಿಂದಲೂ ಭೇಷ್ ಅನಿಸಿಕೊಂಡಿದ್ದರು. ಆದರೆ ಇದೀಗ ಇವೆಲ್ಲವುಗಳಿಗಿಂತ ಒಂದು ಹೆಜ್ಜೆ ಮುಂದೆ ಎನ್ನುವಂತೆ ಓಬೆಲೆ ಲೇಲೆ ಐಲೇ ಸಾ ಐ ಲೇಸಾ ಅನ್ನುತ್ತಾ ಕೆಸರಿನ ಗದ್ದೆಗೆ ಇಳಿದು ನಾಟಿ ಕೆಲಸ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಹೌದು, ಕೊಣಾಜೆಯ ಅಣ್ಣೆರೆ ಪಾಲು ಗದ್ದೆಯಲ್ಲಿ ಮಂಗಳೂರು ರಥಬೀದಿಯ ಡಾ. ಪಿ. ದಯಾನಂದ ಪೈ, ಪಿ. ಸತೀಶ ಪೈ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು, ರೆಡ್ ರಿಬ್ಬನ್ ಮತ್ತು ಕೊಣಾಜೆ ಗ್ರಾಮ ಪಂಚಾಯತ್, ರೈತ ಸಂಘ ಹಸಿರು ಸೇನೆ, ಮಾಧ್ಯಮ ಕೇಂದ್ರ ತೊಕ್ಕೊಟ್ಟು ಇದರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ನಡಿಗೆ ರೈತರ ಹಡೀಲು ಭೂಮಿಯ ಕಡೆಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಯು ಟಿ ಖಾದರ್ ಅವರಿಗೆ ಅಹ್ವಾನವಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಸಚಿವರು ತಡವಾಗಿ ಆಗಮಿಸಿದ್ದು, ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸಚಿವರು ವಿದ್ಯಾರ್ಥಿಗಳ ಜೊತೆ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡು, ಕೆಸರಿನ ಗದ್ದೆಗಿಳಿದು ವಿದ್ಯಾರ್ಥಿಗಳ ಕೃಷಿ ಕೆಲಸಕ್ಕೆ ಸ್ಪೂರ್ತಿ ತುಂಬಿದರು.
ಸ್ಥಳೀಯ ಮುಖಂಡರ ಜೊತೆಗೆ ಗದ್ದೆಗಿಳಿದ ಸಚಿವರು, ವಿದ್ಯಾರ್ಥಿಗಳು ನಡೆಸುತ್ತಿದ್ದ ನಾಟಿ ಕಾರ್ಯದಲ್ಲಿ ಕೈಜೋಡಿಸಿದರು. ಕೆಸರು ತುಂಬಿದ್ದ ಗದ್ದೆಯಲ್ಲಿ ನೇಜಿಯನ್ನು ಕೈಯಲ್ಲಿ ಹಿಡಿದುಕೊಂಡು ನೆಡಲು ಆರಂಭಿಸಿದರು. ಮಾತ್ರವಲ್ಲದೇ, ಎಪಿಎಂಸಿ ಉಪಾಧ್ಯಕ್ಷೆ ಹಾಗೂ ಕೊಣಾಜೆ ಗ್ರಾ.ಪಂ ಸದಸ್ಯೆ ಮುತ್ತು ಶೆಟ್ಟಿ ಇವರ ಪಾಡ್ದನ ಮತ್ತು ತುಳು ಪದಕ್ಕೆ ಧ್ವನಿಗೂಡಿಸಿ ವಿದ್ಯಾರ್ಥಿಗಳಲ್ಲಿ ಉತ್ಸಾಹವನ್ನು ತುಂಬಿದರು.
ಇದೇ ವೇಳೆ ಮಾತನಾಡಿದ ಸಚಿವರು, ಆಧುನಿಕ ಮತ್ತು ವೈಜ್ಞಾನಿಕ ಕಾಲದಲ್ಲಿ ಕೃಷಿ ಚಟುವಟಿಕೆ ನಶಿಸಿ ಹೋಗುತ್ತಿದೆ. ಆದರೆ ಯುವ ವಿದ್ಯಾರ್ಥಿಗಳ ಮೂಲಕವೇ ಬರಡಾದ ಭೂಮಿಗೆ ಮತ್ತೆ ಫಲ ಕೊಡುವ ಕೆಲಸವನ್ನು ಮಾಡಿಸುತ್ತಿರುವುದು ಹೆಮ್ಮೆಯ ಸಂಗತಿ. ಈ ಮೂಲಕ ಜಿಲ್ಲೆಯ ಮಣ್ಣಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಕೆಲಸವಾಗಿದೆ. ಗದ್ದೆಯನ್ನು ಉಪಯೋಗಿಸದೆ ಬರಡಾಗಿ ಬಿದ್ದ ಭೂಮಿಗೆ ಪುನರ್ ಜೀವನ ಕೊಡುವುದರ ಮೂಲಕ ರೈತರಿಗೆ ಪ್ರೋತ್ಸಾಹವನ್ನು ಈ ಕಾರ್ಯಕ್ರಮ ನೀಡಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ತೆರಳುವ ವೇಳೆ ಗದ್ದೆಗಳು ಮಾಯವಾಗುತ್ತಿದೆ ಅನ್ನುವ ಭಯ ಹುಟ್ಟುತಿತ್ತು, ಆದರೆ ಇಂತಹ ಹಡೀಲು ಬಿದ್ದ ಗದ್ದೆಗಳಲ್ಲಿ ಮತ್ತೆ ಕೆಲಸವನ್ನು ಆರಂಭಿಸಿರುವುದು ಕೃಷಿ ಕ್ಷೇತ್ರಕ್ಕೆ ಉತ್ತಮ ಸಂದೇಶವನ್ನು ನೀಡುತ್ತದೆ ಎಂದು ಕಾರ್ಯಕ್ರಮವನ್ನು ಶ್ಲಾಘಿಸಿದರು.
ಮಾದರಿಯಾದ ರಥಬೀದಿ ಕಾಲೇಜಿನ ವಿದ್ಯಾರ್ಥಿಗಳ ಕಾರ್ಯಕ್ರಮ:
ರಥಬೀದಿ ಕಾಲೇಜಿನ ವಿದ್ಯಾರ್ಥಿಗಳ ಈ ಕಾರ್ಯ ಎಲ್ಲರಿಗೂ ಮಾದರಿ ಕಾರ್ಯಕ್ರಮವಾಗಿದೆ. ಯಾಕಂದರೆ, ಈ ಕಾಲೇಜಿನ ವಿದ್ಯಾರ್ಥಿಗಳು ಕಳೆದ ಮೂರು ತಿಂಗಳಿನಿಂದ ಕೊಣಾಜೆ ಗ್ರಾಮ ಪಂಚಾಯಿತಿನ ಪುರುಷಕೋಡಿ, ಅಣ್ಣೆರೆಪಾಲು, ದೇವಂದಬೆಟ್ಟ, ಕೊಪ್ಪಳ, ಮೇಲ್ಮನೆ ಗಟ್ಟಿಮೂಲೆಯಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅರಣ್ಯ ನಿರ್ಮಾಣ, ಸ್ವಚ್ಛತೆ, ಕೆರೆ ನಿರ್ಮಾಣ ಮತ್ತು ಗ್ರಾಮದ ಸರ್ವೆ ಕಾರ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ವಾರದಲ್ಲಿ ಎರಡು ಬಾರಿ ಗ್ರಾಮಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮದಲ್ಲಿ ಹಡೀಲು ಬಿದ್ದ ಗದ್ದೆಗಳನ್ನು ದತ್ತು ಪಡೆದುಕೊಂಡು ಕೃಷಿ ಮಾಡುತ್ತಿದ್ದಾರೆ. ಇಂತಹ ಸಮಾಜಮುಖಿ ಚಟುವಟಿಕೆಗಳಲ್ಲಿ ನಾವೂ ಕೈ ಜೋಡಿಸೋಣ...