ಮಂಗಳೂರು, ಫೆ 16 : ನಗರದಲ್ಲಿ ಕೆಲ ದಿನಗಳ ಹಿಂದೆ ನಡೆದ ಸರಣಿ ಶೂಟೌಟ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಭೂಗತ ಪಾತಕಿ ಕಲಿ ಯೋಗೀಶನ ಸಹಚರನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮುಲ್ಕಿಯ ಚಿತ್ರಾಪು ನಿವಾಸಿ ತೇಜ್ ಪಾಲ್ (32) ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ 2 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ಇದೀಗ ಶೂಟೌಟ್ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೆ ಏರಿದೆ. ಕಾರ್ ಸ್ಟ್ರೀಟ್, ನಗರ ಹೊರವಲಯದ ಮುಲ್ಕಿ ಹಾಗೂ ಕಿನ್ನಿಗೋಳಿಯಲ್ಲಿ ಇತ್ತೀಚೆಗೆ ನಡೆದ ಸರಣಿ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಉದ್ಯಮಿಗಳನ್ನು ಬೆದರಿಸಿ ಹಣ ವಸೂಲು ಮಾಡುವ ಸರಣಿ ಶೂಟೌಟ್ ಪ್ರಕರಣಗಳಲ್ಲಿ ಇನ್ನೂ ಹಲವಾರು ಜನ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.