ವಿಶೇಷ ವರದಿ : ಅನುಷ್ ಪಂಡಿತ್
ಚಿತ್ರ: ರಮೇಶ್ ಪಂಡಿತ್
ಮಂಗಳೂರು , ಫೆ 16 : ಉಳ್ಳಾಲದ ನೇತ್ರಾವತಿ ಸೇತುವೆ ಪಕ್ಕದಲ್ಲಿನ ಪ್ರಕೃತಿ ಸೌಂದರ್ಯ ನಯನ ಮನೋಹರ . ಒಂದೆಡೆ ಹಳಿಯಲ್ಲಿ ಸಂಚರಿಸುವ ರೈಲು, ಮತ್ತೊಂದೆಡೆ ಹರಿಯುವ ನೀರು, ಹಿತವಾಗಿ ಬೀಸುವ ತಂಗಾಳಿ, ಸೂರ್ಯೋದಯ ಸೂರ್ಯಸ್ತಮಾನದ ರಮಾಣೀಯ ನೋಟ, ಇದನ್ನ ಕಣ್ತುಂಬಿಕೊಳ್ಳಲು ಅನೇಕರು ಇಲ್ಲಿಗೆ ಧಾವಿಸುತ್ತಾರೆ. ಆದರೆ ಇಂತಹ ಪ್ರಕೃತಿ ಸೌಂದರ್ಯದಲ್ಲೊಂದು ನಡುವೆ ಭಯದಿಂದಲೇ ಬದುಕುವ ಜನರಿದ್ದಾರೆ ಕಾರಣ ಉಳ್ಳಾಲ ಹೊಯಿಗೆ ಪ್ರದೇಶಕ್ಕೆ ಸಾಗಲು ನಿರ್ಮಿಸಲಾದ ಕಬ್ಬಿಣದ ರಾಡ್ನ ಕಾಲು ಸಂಕ ಇದೀಗ ಮುರಿದು ಬೀಳುವ ಹಂತದಲ್ಲಿದೆ. ಸರಿ ಸುಮಾರು ಮೂವತ್ತಾರು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಮರದ ದಿಣ್ಣೆಯೇ ಸೇತುವೆಯಾಗಿತ್ತು. ಅನಂತರ ಜನರ ಕೋರಿಕೆಯ ಮೇರೆಗೆ ಕಬ್ಬಿಣದ ರಾಡ್ ಅಳವಡಿಸಲಾಗಿತ್ತು.ಆದರೆ ಸದ್ಯ ಈ ಕಾಲುಸೇತುವೆ ಹಳೆಯದಾಗಿ ಜನರ ಜೀವಕ್ಕೆ ಅಪಾಯಕಾರಿಯಾಗಿದೆ .
ಈ ಪ್ರದೇಶದ 350 ಕ್ಕೂ ಹೆಚ್ಚು ಕುಟುಂಬಗಳು ಈ ಸೇತುವೆಯನ್ನೇ ಅನಿವಾರ್ಯವಾಗಿ ಅವಲಂಬಿಸಿಕೊಂಡಿದೆ. ವಯಸ್ಕರು,ಶಾಲಾ-ಕಾಲೇಜು ವಿದ್ಯಾರ್ಥಿಗಳು, ನೂರಾರು ಮಂದಿ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಈ ತುಕ್ಕು ಹಿಡಿದು ಕುಸಿದು ಬೀಳುವ ಪರಿಸ್ಥಿತಿಯ ಕಾಲುಸೇತುವೆಯಲ್ಲ್ಲಿ ಜೀವ ಭಯದಿಂದ ನಗರದ ಬಸ್ ನಿಲ್ದಾಣದವರೆಗೆ ಸಾಗಿ ಬರುವ ಅನಿವಾರ್ಯತೆಯಿದೆ. ಕಾಸರಗೋಡು ,ಕಣ್ಣೂರಿನಿಂದ ರೈಲು ಗಾಡಿಯ ಮೂಲಕ ಬರುವ ಪ್ರಯಾಣಿಕರು,ರೈಲು ಕ್ರಾಸಿಂಗ್ ಸಂದರ್ಭದಲ್ಲಿ ಇಳಿದು ನೇತ್ರಾವತಿ ಬಳಿ ಬಸ್ಸಿಗೆ ಬರಲು ಈ ಕಾಲು ಸಂಕ ದಾಟಬೇಕಾಗುತ್ತದೆ. ಇದಲ್ಲದೇ ರೈಲಿನಲ್ಲಿ ಬರುವ ಪ್ರಯಾಣಿಕರಿಗೆ ನಗರದ ಇತರೆಡೆ ಹೋಗುವ ಸಮೀಪದ ದಾರಿ ಇದಾಗಿದೆ. ಆದರೆ ಈ ಕಾಲುಸಂಕದ ದುರಸ್ತಿಯತ್ತ ಅಥವಾ ಹೊಸ ಸಂಕದ ನಿರ್ಮಾಣದತ್ತ ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ ಎನ್ನುವುದು ಸ್ಥಳೀಯರ ಅಳಲು.
ಈ ಬಗ್ಗೆ ಶಾಸಕ ಜೆ.ಆರ್.ಲೋಬೋ ಅವರನ್ನು ಕೇಳಿದ್ರೆ, " 35 ಲಕ್ಷ ರೂಪಾಯಿಗಳನ್ನು ಸಂಕ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿದ್ದೇನೆ. ಇನ್ನು ಮಂಗಳೂರು ಮಹಾನಗರ ಪಾಲಿಕೆಯೂ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕಾಗಿದೆ" ಎಂದುತ್ತರಿಸುತ್ತಾರೆ. ಆದರೆ ಸ್ಥಳೀಯ ಕಾರ್ಪೋರೇಟರ್ ಸುರೇಂದ್ರ ಅವರು 35 ಲಕ್ಷ ರೂ ಬಿಡುಗಡೆಯಾದ ಮಾಹಿತಿ ನನಗಿಲ್ಲ. ಶಾಸಕರ ಬಳಿಯಲ್ಲಿ ವಿಚಾರಿಸುತ್ತೇನೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಇಲ್ಲಿ ಅನಾಹುತ ಸಂಭವಿಸುವ ಮೊದಲು ಸಂಕದ ನಿರ್ಮಾಣವಾದರೆ ಎಲ್ಲರಿಗೂ ಅನುಕೂಲ ಎನ್ನುವುದು ಉಳ್ಳಾಲ ಹೊಯಿಗೆ ನಿವಾಸಿಗಳ ಅನಿಸಿಕೆ.