ಮಂಗಳೂರು, ಫೆ 16: ದಕ್ಷಿಣ ಕನ್ನಡ ಜಿಲ್ಲೆಯ ವೀರಯೋಧನೊಬ್ಬ ಉಗ್ರರೊಂದಿಗೆ ಹೋರಾಡಿ ಕರುನಾಡಿಗೆ ಕೀರ್ತಿ ತಂದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಕಾಶ್ಮೀರಕ್ಕೆ ನುಸುಳಿದ ಲಷ್ಕರ್-ಎ-ತೋಯ್ಬಾ ಭಯೋತ್ಪಾದಕರ ಜೊತೆ ಸಿ.ಆರ್.ಪಿ.ಎಫ್ ಯೋಧರ ತಂಡ ಸೆಣಸಾಡಿದ್ದು, ಅ ತಂಡದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವೀರಯೋಧನೊಬ್ಬ ಸಾಹಸ ಮೆರೆದಿದ್ದಾನೆ.
ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ನೇರಂಕಿ ನಿವಾಸಿ ಜುಬೇರ್ ಉಗ್ರರ ಜೊತೆ ಹೋರಾಡಿದ ಹೆಮ್ಮೆಯ ಯೋಧ. ಕಾಶ್ಮೀರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇವರು ಭಾಗವಹಿಸಿದ್ದು, ಉಗ್ರರನ್ನು ಹೊಡೆದುರುಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕಾಶ್ಮೀರದ ಕಟ್ಟಡವೊಂದರಲ್ಲಿ ಲಷ್ಕರ್-ಎ-ತೋಯ್ಬಾದ ಉಗ್ರರು ಅಡಗಿ ಕುಳಿತು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಈ ವೇಳೆ ಕಾರ್ಯಪ್ರವೃತ್ತರಾದ ಜುಬೇರ್ ನೇತೃತ್ವದ ಸಿ.ಆರ್.ಪಿ.ಎಫ್ ಯೋಧರ ತಂಡ ಕೆಲವೇ ಗಂಟೆಗಳಲ್ಲಿ ಉಗ್ರರನ್ನು ಹೊಡೆದುರುಳಿಸುವಲ್ಲಿ ಸಫಲರಾಗಿದ್ದರು.
ಇದೀಗ ಉಗ್ರರ ಮುಂದೆ ಶೌರ್ಯ ಮೆರೆದ ಜುಬೇರ್ ಕಾರ್ಯಕ್ಕೆ ಕರಾವಳಿ ಸೇರಿದಂತೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.