ವಿಟ್ಲ, ಫೆ.15: ಪ್ರಕೃತಿಯಲ್ಲಿ ನಾಗನಿಗೆ ವಿಶಿಷ್ಟ ಸಂಬಂಧವಿದೆ. ಅದೇ ರೀತಿ ನಾಗನಿಗೂ ಭೂಮಂಡಲಕ್ಕೂ ಸಾಕಷ್ಟು ಸಂಬಂಧವಿದೆ. ನಾಗನಿಂದ ಯೋಗ ಭಾಗ್ಯ ಬರುತ್ತದೆ. ವಿಜ್ಞಾನ ಮುಂದುವರಿದಂತೆ ಸಮಾಜದಲ್ಲಿ ದುರ್ಘಟನೆ ಸಂಭವಿಸುತ್ತಲೇ ಇದೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ಲೋಕಕಲ್ಯಾಣಾರ್ಥವಾಗಿ ಅಷ್ಟಪವಿತ್ರ ನಾಗಮಂಡಲೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಮಾಣಿಲ ಶ್ರೀಧಾಮದಲ್ಲಿ ಫೆ.18ರಿಂದ 25ರ ತನಕ ನಡೆಯುವ ಅಷ್ಟಪವಿತ್ರ ನಾಗಮಂಡಲೋತ್ಸವ ಪ್ರಯುಕ್ತ ಕ್ಷೇತ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಫೆ.18ರಂದು ಮಂಗಳೂರು ಶ್ರೀ ಮಂಗಳಾದೇವಿ ದೇವಸ್ಥಾನದಿಂದ ವೈಭವದ ಹಸಿರುವಾಣಿ ಹೊರೆಕಾಣಿಕೆ ಹಾಗೂ ಶ್ರೀ ದುರ್ಗಾಪರಮೇಶ್ವರೀ ದೇವಿಯ ಸ್ವರ್ಣ ಮಂಟಪ ಮೆರವಣಿಗೆ ಕ್ಷೇತ್ರಕ್ಕೆ ಆಗಮಿಸಲಿದೆ. ನಾಗಮಂಡಲೋತ್ಸವ ವೇಳೆ ಶ್ರೀನಿವಾಸ ಕಲ್ಯಾಣೋತ್ಸವ, ಪ್ರತಿಷ್ಠಾ ವರ್ಧಂತ್ಯುತ್ಸವ, ಭಜನೋತ್ಸವ,-ಮಹಿಳಾ ಸಮಾವೇಶ, ನೇಮೋತ್ಸವ ಹಾಗೂ ಯಕ್ಷಗಾನ ನಡೆಯಲಿದೆ. ಕ್ಷೇತ್ರದಲ್ಲಿ ನಿರಂತರವಾಗಿ ಯಾಗ ಯಜ್ಞಗಳು ನಡೆಯುತ್ತಿದೆ. ಮನುಷ್ಯನ ಮಾನಸಿಕ ದೌರ್ಬಲ್ಯದ ಪರಿವರ್ತನೆ ಶ್ರೀಧಾಮದಲ್ಲಿ ಅವಿರತವಾಗಿ ನಡೆಯುತ್ತಿದೆ. ಧಾರ್ಮಿಕ ಮೌಲ್ಯದ ಜತೆಗೆ ಸಾಮಾಜಿಕ ಚಿಂತನೆಗಳನ್ನು ಮಾಡುವ ಮೂಲಕ ಕ್ಷೇತ್ರದಲ್ಲಿ ಕಾರ್ಯಗಳು ನಡೆಯುತ್ತಿದೆ. ಕಾಡು ಸಂಪತ್ತುಗಳು ವಿವಿಧ ಯೋಜನೆಗಳಿಂದ ನಾಶ ಹೊಂದುತ್ತಿದೆ. ಅದರ ಜತೆಗೆ ಜೀವರಾಶಿಗಳು ನಾಶ ಹೊಂದುತ್ತಿದೆ. ನಾಗನನ್ನು ಆರಾಧಿಸಿದಾಗ ನಮ್ಮ ಬದುಕಿನಲ್ಲಿ ಬರುವ ಆಚಾರ-ವಿಚಾರಗಳು ಜೀವನದ ಸಮೃದ್ಧಿಗೆ ಸಹಕಾರಿಯಾಗಲಿದೆ. ಧನಾತ್ಮಕ ಪರಿಕಲ್ಪನೆಗಳನ್ನು ಮನೆಮನೆಗಳಲ್ಲಿ ಇರಬೇಕು ಎಂದರು.
ಕ್ಷೇತ್ರದ ಟ್ರಸ್ಟಿ, ನಾಗಮಂಡಲೋತ್ಸವ ಸಮಿತಿ ಗೌರವ ಸಲಹೆಗಾರ ತಾರಾನಾಥ ಕೊಟ್ಟಾರಿ ಅವರು ಮಾತನಾಡಿ, ಯಜ್ಞ, ಯಾಗಾದಿಗಳಿಗೆ ಅತ್ಯಂತ ಶ್ರೇಷ್ಠವಾದ ಮಾಣಿಲ ಕ್ಷೇತ್ರದಲ್ಲಿ ಸ್ವಾಮೀಜಿಯವರು ಜನರ ಕಷ್ಟಗಳಿಗೆ ಸ್ಪಂದಿಸುತ್ತ ದಾನ, ಧರ್ಮಗಳಿಂದ ಸಮಾಜದ ಶ್ರೇಯಸ್ಸಿಗೆ ಕಾರಣರಾಗಿದ್ದಾರೆ. ಅದೇ ರೀತಿಯಲ್ಲಿ ನಾಗಮಂಡಲೋತ್ಸವವು ನಾಡಿನ ಅಭ್ಯುದಯಕ್ಕಾಗಿ ಏರ್ಪಡಿಸಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಪ್ರಚಾರ ಸಮಿತಿ ಸಂಚಾಲಕ ಪುಷ್ಪರಾಜ ಶೆಟ್ಟಿ ಬಿ.ಸಿ.ರೋಡ್, ವ್ಯವಸ್ಥಾಪಕ ವಿಠಲ ಶೆಟ್ಟಿ ಸುಣ್ಣಂಬಳ, ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ.ಶೆಟ್ಟಿ ಸುಣ್ಣಂಬಳ ಮತ್ತಿತರರು ಉಪಸ್ಥಿತರಿದ್ದರು.