ಫೆ.15: ದೇಶದ ಸರ್ವೋಚ್ಚ ನ್ಯಾಯಾಲಯವೂ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆ, ಹತ್ಯೆ, ಹಾಗೂ ಅಪರಾಧಗಳನ್ನು ಅತ್ಯಂತ ಕಠಿಣ ಶಬ್ಧಗಳಿಂದ ಟೀಕಿಸಿದ್ದು, ಈ ವಿಚಾರವಾಗಿ ಮಹತ್ವದ ಆದೇಶ ಹೊರಡಿಸಿದೆ. ಕೋಮುವಿನ ಹೆಸರಿನಲ್ಲಿ ಯಾವುದೇ ಹತ್ಯೆ ನಡೆಸುವಂತಿಲ್ಲ. ಒಂದು ವೇಳೆ ಅಂತಹ ಹತ್ಯೆ ನಡೆದರೆ ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ ಹಾಗೂ ಯಾವುದೇ ನ್ಯಾಯಾಲಯವು ಯಾವುದೇ ಧರ್ಮವೊಂದರ ಮೇಲೆ ಮೃಧು ಧೋರಣೆ ಹೊಂದುವಂತಿಲ್ಲ ಎಂದು ಖಡಕ್ ಆದೇಶ ನೀಡಿದೆ. ಇದಲ್ಲದೆ ಕೋಮು ಗಲಭೆಯ ಪ್ರಕರಣಗಳಲ್ಲಿ ಪೂರ್ವಾಗೃಹಪೀಡಿತರಾಗಿ ತೀರ್ಪು ನೀಡುವಂತಿಲ್ಲ ಎಂದು ಆದೇಶದಲ್ಲಿ ಹೇಳಿದೆ.
ಸಾಂದರ್ಭಿಕ ಚಿತ್ರ
ಈ ಆದೇಶವನ್ನು ಪುಣೆ ಕೊಲೆ ಪ್ರಕರಣದ ಮೂವರು ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಹೊರಡಿಸಿದೆ. ಜಾಮೀನು ಅರ್ಜಿ ಸಲ್ಲಿಸಿದ್ದ ಮೂವರು ಆರೋಪಿಗಳು ಹಿಂದೂ ರಾಷ್ಟ್ರೀಯ ಸೇನೆಯ ಸದಸ್ಯರಾಗಿದ್ದು, 2014 ರಲ್ಲಿ ಹಸಿರು ಟೀ ಶರ್ಟ್ ಧರಿಸಿ ಗಡ್ಡ ಬಿಟ್ಟಿದ್ದ ಮುಸಲ್ಮಾನ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದರು. ಧರ್ಮದ ಆಧಾರದಲ್ಲಿ ಕೊಲೆ ಮಾಡಲು ಪ್ರಚೋದನೆ ನೀಡಲಾಗಿತ್ತು ಎಂದು ಹೈಕೋರ್ಟ್ ನಲ್ಲಿ ವಾದ ಮಂಡಿಸಿ ಇವರು ಜಾಮೀನು ಪಡೆದುಕೊಂಡಿದ್ದರು. ಆದರೆ ಈ ತೀರ್ಪಿಗೆ ಇದೀಗ ಸರ್ವೋಚ್ಚ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದ್ದು ಹೈ ಕೋರ್ಟ್ ನೀಡಿರುವ ಈ ಆದೇಶವನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಮುಂಬೈ ಹೈ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮೃತ ಶೇಖ್ ಅಹ್ಮದ್ರವರ ಕುಟುಂಬಸ್ಥರೊಬ್ಬರು ಮೇಲರ್ಜಿ ಸಲ್ಲಿಸಿದ್ದರು. ಈ ವಿಚಾರಣೆ ಕೈಗೆತ್ತಿಕೊಂಡ ಸುಪ್ರಿಂ ಆರೋಪಿಗಳಿಗೆ ಕೋರ್ಟ್ ನಲ್ಲಿ ಶರಣಾಗುವಂತೆ ಸೂಚಿಸಿದ್ದು , ಜಾಮೀನಿಗಾಗಿ ಮತ್ತೊಮ್ಮೆ ಹೊಸ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.