ಮಂಗಳೂರು, ಫೆ 14 : ರಾಜ್ಯ ವಿಧಾನ ಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಂತೆ, ಕರಾವಳಿಯಲ್ಲೂ ಬಿರುಸಿನ ರಾಜಕೀಯ ಚಟುವಟಿಕೆಗಳು ಗರಿಕೆದರಿದೆ. ತಮ್ಮ ತಮ್ಮ ಪಕ್ಷಗಳನ್ನು ಇನ್ನಷ್ಟು ಬಲಶಾಲಿಗೊಳಿಸಿಲು ರಾಜ್ಯದ ಹಾಗೂ ಜಿಲ್ಲಾ ನಾಯಕರುಗಳು ಕೇಂದ್ರ ನಾಯಕರ ಮೊರೆ ಹೋಗಿದ್ದಾರೆ . ಅದರಂತೆ ಬಿಜೆಪಿ ಪಕ್ಷ ಸಂಘಟನೆ ಹಾಗೂ ಚುನಾವಣಾ ಪ್ರಚಾರಕ್ಕಾಗಿ ಫೆಬ್ರವರಿ 19ರ ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಂಗಳೂರಿಗೆ ಆಗಮಿಸಿ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಂಗಲಿದ್ದಾರೆ. ಫೆಬ್ರವರಿ 20 ರ ಬೆಳಗ್ಗೆ ಕುಕ್ಕೆ ಸುಬ್ರಹ್ಮಣ್ಯ ದರ್ಶನ ಮಾಡಲಿದ್ದು, ಬಳಿಕ ಉಡುಪಿಯ ಶ್ರೀಕೃಷ್ಣಮಠಕ್ಕೆ ತೆರಳಲಿದ್ದಾರೆ. ಫೆಬ್ರವರಿ 22ರಂದು ದೀಪಕ್ ರಾವ್ ಮನೆಗೆ ತೆರಳಲಿದ್ದಾರೆ. ಜೊತೆಗೆ ಬಿಜೆಪಿ ಮೀನುಗಾರರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ, ಮಡಿಕೇರಿಯ ಕುಶಾಲನಗರದಿಂದ ಹಾಗೂ ಅಂಕೋಲಾದಿಂದ ಮಾರ್ಚ್ 3ರಿಂದ 6ರವರೆಗೆ ಬಿಜೆಪಿ ಕರ್ನಾಟಕ ಸುರಕ್ಷಾ ಯಾತ್ರೆ ನಡೆಸಲಿದೆ. ಸುರತ್ಕಲ್ನಲ್ಲಿ ಸಮಾರೋಪ ನಡೆಯಲಿದೆ. ಅಲ್ಲಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಲಿದ್ದಾರೆ. ಇದರ ಜೊತೆಗೆ 27ರಂದು ದಾವಣಗೆರೆಯಲ್ಲಿ ಬೃಹತ್ ರೈತ ಸಮಾವೇಶ ನಡೆಯಲಿದ್ದು, ಈ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ.
ಇನ್ನು ಇದಲ್ಲದೆ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕಾಗಿ ಮಾರ್ಚ್ ಮೊದಲ ವಾರದಲ್ಲಿ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕರಾವಳಿಗೆ ಬರುವುದು ಬಹುತೇಕ ನಿಚ್ಚಳವಾಗಿದೆ. ಇದನ್ನು ಈಗಾಗಲೇ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಯು.ಬಿ. ವೆಂಕಟೇಶ್ ಪತ್ರಿಕಾಗೋಷ್ಟಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಗೆ ಭೇಟಿ ನೀಡಲಿರುವ ಅವರು ಉಭಯ ಜಿಲ್ಲೆಗಳ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಬಸ್ ಮೂಲಕ ಪಕ್ಷದ ಹಿರಿಯ ನಾಯಕರ ಜತೆ ಸಂಚಾರ ಮಾಡಲಿದ್ದಾರೆ. ಒಟ್ಟು ನಾಲ್ಕು ದಿನ ರಾಹುಲ್ ಗಾಂಧಿ ಕರಾವಳಿ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಲಿದ್ದು, ಕೆಲವೆಡೆ ಸಂವಾದ ಕಾರ್ಯಕ್ರಮಗಳು ನಿಗದಿಯಾಗಿದೆ. ಒಟ್ಟಾರೆ ಕರಾವಳಿಯ ಜಿಲ್ಲೆಗಳು ಬಿಜೆಪಿ ಹಾಗೂ ಕಾಂಗ್ರೆಸ್ ಪಾಲಿಗೆ ಪ್ರತಿಷ್ಟೆಯ ಸಂಕೇತವಾಗಿದೆ.