ಕುಂದಾಪುರ, ಫೆ15 : ಸುಮಾರು ಮೂರು ವರ್ಷದ ಹಿಂದೆ ಕರಾವಳಿಯನ್ನೇ ಬೆಚ್ಚಿಬೀಳಿಸಿದ ಗರ್ಭಿಣಿ ಅತ್ಯಾಚಾರ ಪ್ರಕರಣದ ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆ ಕುಂದಾಪುರ ಜಿಲ್ಲಾ ಸತ್ರ ನ್ಯಾಯಾಲಯ ಫೆ.20ರಂದು ಶಿಕ್ಷೆಯನ್ನ ಪ್ರಕಟಿಸಲಿದೆ. 2015ರ ಎಪ್ರಿಲ್ 11ರಂದು ನೀರು ಕೇಳುವ ನೆಪದಲ್ಲಿ ಮನೆಗೆ ಬಂದ ಪ್ರಶಾಂತ್ ಮೋಗವೀರನೆಂಬ ಕಾಮುಕ ಮೂಡುಗೋಪಾಡಿಯ ಇಂದಿರಾ ಎಂಬ ಗರ್ಭಿಣಿ ಮೇಲೆ ಅಮಾನವೀಯವಾಗಿ ಅತ್ಯಾಚಾರ ನಡೆಸಿದ್ದಲ್ಲದೇ, ಆಕೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಆಕೆಯ ಕರಿಮಣಿ ಸರವನ್ನ ಅಪಹರಿಸಿದ್ದ. ರಕ್ತಸಿಕ್ತ ಬಟ್ಟೆಯಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಪ್ರಶಾಂತನನ್ನ ಕುಂದಾಪುರ ಪೊಲೀಸರು ಬಂಧಿಸಿದ್ದರು. ಅತ್ಯಂತ ಕ್ರೂರವಾಗಿ ಗರ್ಭಿಣಿ ಯ ಅತ್ಯಾಚಾರ ಮತ್ತು ಕೊಲೆ ಮಾಡಿದ ಹಿನ್ನೆಲೆ ಆತನಿಗೆ ನ್ಯಾಯಾಲಯ ಜಾಮೀನು ನೀಡಲೂ ಕೂಡ ನಿರಾಕರಿಸಿತ್ತು.
ಈ ಪ್ರಕರಣವನ್ನ ವಿಶೇಷ ಸರ್ಕಾರಿ ಅಭಿಯೋಜಕರಾಗಿ ರವಿಕಿರಣ್ ಮುರ್ಡೆಶ್ವರ ವಾದಿಸಿದ್ದು, ಆರೋಪಿಯ ಮೇಲೆ ಹೊರಿಸಲಾದ ಎಲ್ಲಾ ಆಪಾದನೆಗಳೂ ಸಾಬೀತಾದ ಹಿನ್ನೆಲೆ ಕುಂದಾಪುರಲ್ಲಿನ ಜಿಲ್ಲಾ ಸತ್ರ ನ್ಯಾಯಾಲಯ ಆರೋಪಿಯನ್ನ ದೋಷಿ ಎಂದು ಪರಿಗಣಿಸಿದೆ.
ದರೋಡೆ, ಗರ್ಭಿಣಿಯ ಮೇಲೆ ಅತ್ಯಾಚಾರ , ಕೊಲೆ ಹಾಗೂ ಮಗು ಸಾವಿಗೆ ಕಾರಣವಾದ ಗಂಭೀರವಾದ ಈತನ ಮೇಲೆದ್ದು ಎಲ್ಲವೂ ಸಾಬೀತಾಗಿದೆ. ಇದು ಕುಂದಾಪುರದ ಇತಿಹಾಸದಲ್ಲೇ ಅಪರೂಪದ ಪ್ರಕರಣವಾಗಿದ್ದು, ತಪ್ಪಿತಸ್ಥನಿಗೆ ಮರಣದಂಡನೆ ನೀಡುವಂತೆ ವಾದ ಮಂಡಿಸಿದ್ದೇನೆ ಎಂದು ವಿಶೇಷ ಸರಕಾರಿ ಅಭಿಯೋಜಕ ರವಿಕಿರಣ್ ಮುರ್ಡೇಶ್ವರ ಹೇಳಿದ್ದಾರೆ.