ಕಡಬ, ಫೆ 14: ಶಿವರಾತ್ರಿ ಹಿನ್ನಲೆಯಲ್ಲಿ ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ದೇಗುಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು ಈ ಪ್ರಯುಕ್ತ ಕುಕ್ಕೇ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ದೇವಸ್ಥಾನಕ್ಕೆ ಆಗಮಿಸಿದ್ದ ದೂರದೂರಿನ ಭಕ್ತರು ಹಿಂತಿರುಗಿ ಹೋಗಲು ಸೂಕ್ತ ವ್ಯವಸ್ಥೆಗಳಿಲ್ಲದೆ ಪರದಾಡುವ ಸ್ಥ್ತಿತಿ ನಿರ್ಮಾಣವಾಯಿತು. ಫೆ .14ರ ಮಂಗಳವಾರ ರೈಲು ಮುಖಾಂತರ ತೆರಳಲು ಸುಬ್ರಹ್ಮಣ್ಯ ನೆಟ್ಟಣ ರೈಲ್ವೇ ನಿಲ್ದಾಣಕ್ಕೆ ಭಕ್ತಾದಿಗಳು ಆಗಮಿಸಿದಾಗ ನೂಕು ನುಗ್ಗಲು ಉಂಟಾಗಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾದ ಸ್ಥಿತಿ ನಿರ್ಮಾಣವಾಯಿತು. ಟಿಕೆಟ್ ನೀಡಲು ಒಂದೇ ಕೌಂಟರ್ ಇದ್ದುದರಿಂದ ಪ್ರಯಾಣಿಕರು ಟಿಕೆಟ್ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದು, ಇದ್ದ ಓರ್ವ ರೈಲ್ವೇ ಪೊಲೀಸ್ ಸಿಬ್ಬಂದಿಯನ್ನು ಜನರು ತಳ್ಳಿ ಹಾಕಿ ನೂಕುನುಗ್ಗಲು ನಡೆಸಿದ್ದರಿಂದ ಸ್ಥಳದಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಯ್ತು. ಬಳಿಕ ಸುದ್ದಿ ತಿಳಿದು ಕಡಬ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸಹಕರಿಸಿದರು. ಶಿರಾಡಿ ಘಾಟ್ ಕಾಂಕ್ರೀಟಿಕರಣಕ್ಕಾಗಿ ಕಳೆದ ಒಂದು ತಿಂಗಳಿಂದ ಬಂದ್ ಆಗಿದ್ದು , ಕಿರಿದಾದ ಚಾರ್ಮಾಡಿ ಘಾಟ್ ಅಥವಾ ಸುತ್ತಿಬಳಸಿ ಹೋಗಬೇಕಾದ ಅನಿವಾರ್ಯತೆ ಇರೋದ್ರಿಂದ ಹಾಸನ ಬೆಂಗಳೂರು ಮುಂತಾದ ಜಿಲ್ಲೆಗಳ ಭಕ್ತರು ರೈಲನ್ನೇ ಹೆಚ್ಚಾಗಿ ಅವಲಂಬಿಸಿಕೊಂಡಿದ್ದಾರೆ.