ಮಂಗಳೂರು,ಫೆ 14 : ಪಕೋಡಾ ವ್ಯಾಪಾರಿಯೋರ್ವರ ನಿರ್ಲಕ್ಷದಿಂದ ಬಾಲಕಿಯೊಬ್ಬಳಿಗೆ ಕುದಿಯುತ್ತಿರುವ ಎಣ್ಣೆ ಬಿದ್ದು ತೀವ್ರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಫೆ. 11 ರ ಭಾನುವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗಾಯಗೊಂಡ ಬಾಲಕಿಯನ್ನು ಬಜ್ಜೋಡಿಯ ವಿಕ್ಟರ್ ಡಿ ಸೋಜಾ ಅವರ ಪುತ್ರಿ ಅಮಂಡಾ (14) ಎಂದು ಗುರುತಿಸಲಾಗಿದೆ. ಬಾಲಕಿಯು ತನ್ನ ತಂದೆಯೊಂದಿಗೆ ಫೆ. 11 ರಂದು ಸೆಂಟ್ರಲ್ ಮಾರುಕಟ್ಟೆಯಲ್ಲಿ ತರಕಾರಿ ಹಾಗೂ ಹಣ್ಣು ಹಂಪಲುಗಳನ್ನು ಖರೀದಿಸಿ ಮರಳುತ್ತಿರುವಾಗ ಸ್ಥಳೀಯ ಬೀದಿ ಬದಿಯಲ್ಲಿ ಪಕೋಡಾ ಬಜ್ಜಿ ಮಾರುವ ಮಹಿಳಾ ವ್ಯಾಪಾರಿಯೊಬ್ಬಳು ದಾರಿಗೆ ಬಿಸಿ ಎಣ್ಣೆ ಎಸೆದಿದ್ದಾರೆ . ಆ ಸಂದರ್ಭ ಎರಚಿದ ಎಣ್ಣೆಯು ಬಾಲಕಿಗೆ ತಗುಲಿದ್ದು ಅಮಂಡಾ ಕಾಲಿಗೆ ಗಂಭೀರ ಗಾಯಗಳಾಗಿದೆ ಎಂದು ಬಾಲಕಿ ತಂದೆ ದೂರಿದ್ದಾರೆ. ಬೀದಿ ವ್ಯಾಪಾರಿಯ ಅಜಾಗ್ರತೆಯಿಂದಾಗಿ ನಗರದ ಖಾಸಗಿ ಶಾಲೆಯಲ್ಲಿ ಸಿಬಿಎಸ್ಸಿ 8 ನೇ ತರಗತಿ ಓದುತ್ತಿರುವ ಮಗಳು, ಮುಂಬರುವ ವಾರ್ಷಿಕ ಪರೀಕ್ಷೆ ಗೆ ಹಾಜರಾಗುವುದು ಅನುಮಾನವಾಗಿದೆ ಎಂದು ಬಾಲಕಿಯ ತಂದೆ ವಿಕ್ಟರ್ ಡಿ ಸೋಜಾ ಮೇಯರ್ ಕವಿತಾ ಸನಿಲ್ ಗೆ ಲಿಖಿತ ದೂರಿನಲ್ಲಿ ಅವಲತ್ತುಕೊಂಡಿದ್ದಾರೆ. ಹೀಗಾಗಿ ಮಹಿಳಾ ವ್ಯಾಪಾರಿಯ ವಿರುದ್ದ ಕ್ರಮ ಕೈಗೊಳ್ಳಬೇಕು ಇದೇ ವೇಳೆ ಒತ್ತಾಯಿಸಿದ್ದಾರೆ. ಇನ್ನು ಈ ಬಗ್ಗೆ ಬಂದರು ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.