ಮಂಗಳೂರು, ಫೆ 14: ಎಳನೀರಿನ ಗಂಜಿಗೆ ಐಸ್ ಕ್ರೀಮ್ ಬೆರೆಸಿ ತಯಾರು ಮಾಡುವ ಹೊಸ ತಿನಿಸಿಗೆ ಇದೀಗ ಮಂಗಳೂರಿಗರೇ ಫಿದಾ ಆಗಿದ್ದಾರೆ.
ಬಾಯಾರಿದ, ಹಸಿದವನ ಕೊರತೆ ನೀಗಿಸುವ ಎಳನೀರು ಉತ್ತಮ ಪೌಷ್ಠಿಕಾಂಶವುಳ್ಳದ್ದು. ಎಳನೀರು ಬಲಿತ ಕಾಯಿಯಾದರೆ ಯಾರೂ ಇದರತ್ತ ಕಣ್ಣು ಕೂಡಾ ಹಾಯಿಸಲ್ಲ. ಆದರೆ ಇಲ್ಲೊಬ್ಬ ನಿವೃತ್ತ ಉಪನ್ಯಾಸಕರು ಎಳನೀರು ಆದರೂ ಓಕೆ, ಬಲಿತ ಕಾಯಿಯಾದರೂ ಓಕೆ ಅದರಿಂದ ಎಳನೀರು ಐಸ್ ಕ್ರೀಮ್ ತಯಾರಿಸುತ್ತಾರೆ. ಅದು ತರಹೇವಾರಿ ರೂಪದಲ್ಲಿ.
ಅಷ್ಟಕ್ಕೂ ಇದೇನು ಸಾಮಾನ್ಯವಾದ ಐಸ್ ಕ್ರೀಂ ಅಲ್ಲ. ಇದರ ರುಚಿಗೆ ಮಾರು ಹೋಗದವರೇ ಇಲ್ಲ. ಎಳನೀರು ಐಸ್ ಕ್ರೀಮ್ ತಯಾರಾಗುವ ಈ ಅಂಗಡಿಯಲ್ಲಿ ಸ್ಟ್ರಾಬೆರಿ, ಚಾಕ್ಲೇಟ್, ಪೈನಾಪಲ್, ಮೂಸಂಬಿ, ಮ್ಯಾಂಗೋ, ಬ್ಲ್ಯಾಕ್ ಕರೆಂಟ್ ಸೇರಿ ನೂರಕ್ಕೂ ಮಿಕ್ಕಿದ ಫ್ಲೇವರ್ ಗಳು ಸಿಗುತ್ತವೆ. ಇಲ್ಲಿನ ಐಸ್ ಕ್ರೀಮ್ ಅನ್ನು ಒಮ್ಮೆ ಟೇಸ್ಟ್ ಮಾಡಿದ್ರೆ ಸಾಕು, ಜನ ಹುಡುಕಿಕೊಂಡು ಬರುವುದು ಗ್ಯಾರಂಟಿ.
ಈ ಎಳನೀರು ಐಸ್ ಕ್ರೀಮ್ ತಯಾರಾಗುತ್ತಿರುವುದು ಮಂಗಳೂರಿನ ಡೊಂಗರಕೇರಿ ವೆಂಕಟರಮಣ ದೇವಸ್ಥಾನದ ಪಕ್ಕದಲ್ಲಿ. ಸ್ಥಳದಲ್ಲೇ ಎಳನೀರು ಕತ್ತರಿಸಿ, ನೀರು ಕುಡಿಯೋಕೆ ಕೊಟ್ಟು ಒಳಗಿರುವ ಭಾಗಕ್ಕೆ ಬಾಳೆಹಣ್ಣು, ಐಸ್ ಕ್ರೀಮ್, ಫ್ಲೇವರ್ ಹಾಗೂ ಚೋಕೋಸ್ ಮಿಕ್ಸ್ ಮಾಡಿ ತಯಾರಿಸೋ ಈ ಉತ್ಪನ್ನದ ರುಚಿಯೇ ವಿಶಿಷ್ಟ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮೂಲೆಯಿಂದ ಮಾತ್ರವಲ್ಲದೇ, ವಿದೇಶದಲ್ಲಿ ಕೆಲಸ ಮಾಡುತ್ತಿರುವವರು ಕೂಡಾ ಹುಡುಕಿಕೊಂಡು ಬಂದು ಇಲ್ಲಿನ ಎಳನೀರು ಐಸ್ ಕ್ರೀಂ ಟೇಸ್ಟ್ ಸವಿಯುತ್ತಾರೆ. ಇದನ್ನು ತಯಾರಿಸುವುದು ಓರ್ವ ನಿವೃತ್ತ ಎಂಜಿನಿಯರ್, ಇವರು ಉಪನ್ಯಾಸಕ ಕೂಡ ಹೌದು. ಹೆಸರು ಎಂ. ಸೀತಾರಾಮ ಕಾಮತ್. ಈ ವ್ಯಕ್ತಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದವರು. ವಿವಿಧ ಕಂಪೆನಿಗಳಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ದುಡಿದಿದ್ದರು. ಮಂಗಳೂರಿನ ಖ್ಯಾತ ಅಲೋಶಿಯಸ್ ಕಾಲೇಜಿನಲ್ಲಿ ಹತ್ತು ವರ್ಷಗಳ ಕಾಲ ಹಾಗೂ ಇತರೆಡೆಯೂ ಉಪನ್ಯಾಸಕರಾಗಿಯೂ ಕೆಲಸ ಮಾಡಿದ್ದರು. ಈ ವೇಳೆ ಸಚಿವ ಯು.ಟಿ. ಖಾದರ್, ಎಂ.ಎಲ್.ಸಿ ಐವನ್ ಡಿಸೋಜಾ, ಶಾಸಕ ಅಭಯಚಂದ್ರ ಜೈನ್ ಇವರ ಶಿಷ್ಯರಾಗಿದ್ರು. ಜೀವನದಲ್ಲಿ ಎದುರಾದ ಆರ್ಥಿಕ ಸವಾಲಿನಿಂದ ಎಂಜಿನಿಯರ್ ಉದ್ಯೋಗಕ್ಕೆ ಇತಿಶ್ರೀ ಹಾಕಿದ್ದ ಸೀತಾರಾಮ ಕಾಮತ್, ಎಳನೀರು ಕಡಿದು ಅದರಿಂದ ಉಪ ಉತ್ಪನ್ನಗಳನ್ನು ತಯಾರಿಸುವ ಉದ್ಯೋಗ ಆರಂಭಿಸಿದ್ದರು.
ಎಳನೀರಿನಲ್ಲಿ ವಿವಿಧ ಐಟಂಗಳನ್ನು ತಯಾರಿಸುವ ಕಾಮತ್, ಬಾಳೆಹಣ್ಣು, ಡ್ರೈ ಫ್ರುಟ್ಸ್ ಮತ್ತು ವಿವಿಧ ಫ್ಲೇವರ್ ಬಳಸ್ಕೊಂಡು ಐಸ್ ಕ್ರೀಮ್ ತಯಾರಿಸುವುದೇ ವಿಶಿಷ್ಟವಾಗಿರುತ್ತೆ. ಇವರಿಗೆ ಕೂಲಿಗಳ ಕೊರತೆ, ಈಗಿನ ಖರ್ಚಿನ ಕಾರಣದಿಂದಾಗಿ ದೊಡ್ಡದಾಗಿ ಮಾರ್ಕೆಟ್ ಕಂಡುಕೊಳ್ಳಲಾಗಿಲ್ಲ. ಆದರೂ, ಜನರು ಹುಡುಕಿಕೊಂಡು ಬರುತ್ತಿದ್ದಾರೆ ಎನ್ನುತ್ತಾರೆ ಕಾಮತ್. ಇವರು ತಯಾರಿಸುವ ಎಳನೀರು ಐಸ್ ಕ್ರೀಮ್ ಸವಿಯಲು ಜಿಲ್ಲೆಯ ವಿವಿಧೆಡೆಯಿಂದ ಮಾತ್ರವಲ್ಲ, ವಿದೇಶಗಳಲ್ಲಿ ಇರುವವರು ಕೂಡ ಬರುತ್ತಿದ್ದಾರೆ. ಕೇವಲ 60 ರೂಪಾಯಿಗೆ ಸ್ಪಾಟಲ್ಲೇ ಐಸ್ ಕ್ರೀಮ್ ತಯಾರಿಸಿಕೊಡ್ತಾರೆ.