ಬೆಳ್ಳೂರು, ಫೆ 13: ಬಡ ಕುಟುಂಬದ ಮನೆಯೊಂದು ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾಗಿ ಹೋಗಿರುವ ಘಟನೆ ಕಾಸರಗೋಡಿನ ಬೆಳ್ಳೂರಿನಲ್ಲಿ ನಡೆದಿದೆ.
ಕಿನ್ನಿಂಗಾರು ಬಳಿಯ ಮಾವಿನ ಹಿತ್ತಿಲು ನಿವಾಸಿ ದಿ. ಚನಿಯ ಎಂಬವರ ಪತ್ನಿ ಕಮಲಾ ಮತ್ತು ಅವರ ಕುಟುಂಬ ವಾಸಿಸುತ್ತಿದ್ದ ಪುಟ್ಟ ಮನೆ ನಿನ್ನೆ ರಾತ್ರಿ ಬೆಂಕಿಗಾಹುತಿಯಾಗಿದೆ. ದೀಪದಿಂದ ಬೆಂಕಿ ಎಲ್ಲೆಡೆ ಹರಡಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಪುತ್ರಿಯ ಅಕಾಲಿಕ ಸಾವಿನಿಂದ ನೊಂದಿದ್ದ ಕುಟುಂಬವೊಂದು ದುಃಖದಿಂದ ಚೇತರಿಸುವ ಮುನ್ನವೇ ಮತ್ತೊಂದು ಸಂಕಷ್ಟಕ್ಕೆ ಒಳಗಾಗಿದೆ. ಈಗಾಗಲೇ ಕಮಲಾ ಅವರಿಗೆ ಸರಕಾರದಿಂದ ಹೊಸ ಮನೆ ಮಂಜೂರಾಗಿದೆ. ಹೀಗಾಗಿ ಈ ಬಡ ಕುಟುಂಬ ಮನೆಗೆ ಅಡಿಪಾಯ ನಿರ್ಮಿಸಿದ್ದರು. ಆದರೆ ಈ ಕುಟುಂಬ ತಾತ್ಕಾಲಿಕವಾಗಿ ವಾಸಿಸಲು ಒಂದು ಪುಟ್ಟ ಮನೆ ನಿರ್ಮಿಸಿತ್ತು. ಆದರೆ ನಿರ್ಮಿಸಿದ್ದ ಮನೆ ನಿನ್ನೆ ರಾತ್ರಿ ಬೆಂಕಿಗಾಹುತಿಯಾಗಿದೆ.
ಹೊಸ ಮನೆಗೆಂದು ತೆಗೆದಿರಿಸಿದ್ದ ಪೀಠೋಪಕರಣಗಳ ಸಹಿತ ಮನೆಯ ಅಪಾರ ಸೊತ್ತು ಬೆಂಕಿಯಲ್ಲಿ ಉರಿದು ನಾಶಗೊಂಡಿದೆ. ಸುಮಾರು ಒಂದು ಲಕ್ಷ ರೂ. ಗಿಂತಲೂ ಹೆಚ್ಚಿನ ನಾಶ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನೆ ವೇಳೆ ಮನೆಯೊಳಗಿದ್ದ ಕಮಲಾ ಹಾಗೂ ಪುತ್ರ ಆದಿರಾಜ್ ಹೊರಗೆ ಓಡಿದುದರಿಂದ ಅಪಾಯದಿಂದ ಪಾರಾಗಿದ್ದಾರೆ.
ಜನವರಿ 23 ರಂದು ಕಮಲಾ ಅವರ ಪುತ್ರಿ ಮಲ್ಲಿಕಾ ಮತ್ತು ಗಂಡ ಪುರುಷೋತ್ತಮ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯಿಂದ ಕುಟುಂಬ ದುಃಖಿತರಾಗಿದ್ದು, ಈ ಮಧ್ಯೆ ಮನೆಯೂ ಬೆಂಕಿಗಾಹುತಿಯಾಗಿದೆ.
ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ನಂದಿಸಲಾಯಿತು.