ರಾಯಚೂರು, ಫೆ 13: ಬಂಡವಾಳಶಾಹಿಗಳು ಹಾಗೂ ಅಮಿತ್ ಶಾ ಅವರ ಪುತ್ರ ಮಾತ್ರ ಬಿಜೆಪಿ ಆಡಳಿತದಿಂದ ಹಣ ಗಳಿಸಲು ಸಾಧ್ಯ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಜಿಲ್ಲೆಯ ದೇವದುರ್ಗದಲ್ಲಿ ಬುಡಕಟ್ಟು ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು. ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆಸಿರುವ ಡೀಲಿಂಗ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಅಕ್ರಮವಾಗಿ ಗಳಿಸಿರುವ ಆಸ್ತಿಯ ಬಗ್ಗೆ ದೇಶದ ಜನತೆಗೆ ಪ್ರಧಾನಿ ಮೋದಿಯವರು ವಿವರಣೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ಮೋದಿಯವರು ಗಂಟೆಗಟ್ಟಲೇ ಭಾಷಣ ಮಾಡುತ್ತಾರೆ. ಆದರೆ ಅಭಿವೃದ್ಧಿಯ ಒಂದೂ ಕುರುಹಿಲ್ಲ. ಕೇವಲ ಕಾಂಗ್ರೆಸ್ ವಿರುದ್ಧ ಆರೋಪ ಹೊರಿಸುವುದನ್ನೇ ಅವರು ಉದ್ಯೋಗ ಮಾಡಿಕೊಂಡಿದ್ದಾರೆ. ಅವರಿಗೆ ತಾಕತ್ತಿದ್ದರೆ ದೇಶಾದ್ಯಂತ ಇಂದಿರಾ ಕ್ಯಾಂಟೀನ್ಗಳನ್ನು ಆರಂಭಿಸಲಿ. ಕರ್ನಾಟಕದ ಮಾದರಿಯಲ್ಲಿ ರೈತರ ಎಲ್ಲ ಸಾಲ ಮನ್ನಾ ಮಾಡಲಿ ಎಂದು ಸವಾಲ್ ಹಾಕಿದರು.
ದೇಶದಲ್ಲಿ ಎರಡು ರೀತಿಯ ಸರಕಾರಗಳು ಆಡಳಿತ ನಡೆಸುತ್ತಿವೆ. ಕೇಂದ್ರದಲ್ಲಿ ಎನ್ಡಿಎ ನೇತೃತ್ವದ ಜನವಿರೋಧಿ ಹಾಗೂ ಬಂಡವಾಳಶಾಹಿಗಳ ಪರವಾದ ಸರಕಾರವಿದ್ದರೆ, ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ನೇತೃತ್ವದ ಜನಪರ ಸರಕಾರವಿದೆ. ರೈತರ ಸಾಲ ಮನ್ನಾ ಮಾಡದ ಕೇಂದ್ರ ಸರಕಾರವು, ಬಿಜೆಪಿಯ ಪರವಿರುವ ಉದ್ಯಮಿಗಳ 1.50ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಇದು ಕೇಂದ್ರ ಸರಕಾರದ ರೈತ ವಿರೋಧಿ ನೀತಿ ತೋರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.