ಮಂಗಳೂರು, ಫೆ 12: ಯಾರಿಗೆಲ್ಲ ಸಾಯಲು ಮನಸ್ಸಿದೆ ಅವರು ಸಂಘ ಪರಿವಾರ ಸೇರಿ ಎಂದು ಕಾರ್ಕಳದ ಸಭೆಯಲ್ಲಿ ಪ್ರತಿಭಾ ಕುಳಾಯಿ ನೀಡಿರುವ ಹೇಳಿಕೆ ಸರಿಯಾಗಿಯೇ ಇದೆ ಎಂದು ಶಾಸಕ ಮೊಯಿದ್ದೀನ್ ಬಾವಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಾ ಕುಳಾಯಿ ಸತ್ಯವನ್ನೇ ಹೇಳಿದ್ದಾರೆ. ಯಾರಿಗೆಲ್ಲಾ ಸತ್ಯವನ್ನು ಸಹಿಸಲು ಮನಸ್ಸಿಲ್ಲವೋ ಅವರು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಬರವಣಿಗೆಗಳನ್ನು ಹಾಕುತ್ತಿದ್ದಾರೆ. ಮಾತ್ರವಲ್ಲದೆ, ಕೆಲ ಜನ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಾ ಕುಳಾಯಿ ಮತ್ತು ನನಗೆ ಅನೈತಿಕ ಸಂಬಂಧವಿದೆ ಎಂದು ಬರೆದಿದ್ದಾರೆ. ಅದು ಸತ್ಯಕ್ಕೆ ದೂರವಾಗಿದೆ. ನನಗೂ ಪ್ರತಿಭಾ ಕುಳಾಯಿಗೂ ಯಾವುದೇ ಸಂಬಂಧವಿಲ್ಲ. ಇದನ್ನು ನಾನು ಬಹಿರಂಗವಾಗಿ ಖಂಡಿಸುತ್ತೇನೆ ಎಂದು ತಿಳಿಸಿದರು.
ಒಂದು ವೇಳೆ ನನಗೂ ಪ್ರತಿಭಾ ಕುಳಾಯಿ ಅವರಿಗೂ ಸಂಬಂಧವಿದೆ ಎಂದು ಸಾಕ್ಷಿ ಸಮೇತವಾಗಿ ಬಹಿರಂಗ ಮಾಡಿದರೆ ನಾನು ಸಾಮಾಜಿಕ ಜೀವನ ತೊರೆದು ಸನ್ಯಾಸತ್ವ ಸ್ವೀಕರಿಸುತ್ತೇನೆ. ಪ್ರತಿಭಾ ಕುಳಾಯಿ ನನಗೆ ತಂಗಿಯ ಸಮಾನ. ತನ್ನ ತಂಗಿಯನ್ನು ಕೆಟ್ಟ ದೃಷ್ಟಿಯಿಂದ ನೋಡುವವರು, ತಂಗಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡವರು ಸಾಮಾಜಿಕ ಜಾಲತಾಣದಲ್ಲಿ ಇಂತಹ ಬರವಣಿಗೆಗಳನ್ನು ಬರೆದಿದ್ದಾರೆ.
ಜಾತಿಯನ್ನು ಅವಹೇಳನ ಮಾಡುವ ಗುಂಪು ತೆರೆ ಮರೆಯಲ್ಲಿ ಕೆಲಸ ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.