ಮಂಗಳೂರು, ಫೆ 12: ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಸುರತ್ಕಲ್ ನಿವಾಸಿ ದೀಪಕ್ ರಾವ್ ಸಹೋದರನಿಗೆ ಸರ್ಕಾರಿ ಉದ್ಯೋಗ ಲಭಿಸಲಿದೆ.
ಮೃತ ದೀಪಕ್ ರಾವ್ ಸಹೋದರ ಸತೀಶ್ ಅವರಿಗೆ ಅಕ್ಷರದ ಜ್ಞಾನವೇ ಇಲ್ಲ. ಹುಟ್ಟಿನಿಂದಲೇ ಮಾತು ಬರುತ್ತಿಲ್ಲ, ಕಿವಿಯೂ ಕೇಳುತ್ತಿಲ್ಲ. ಈ ಕುಟುಂಬಕ್ಕೆ ದೀಪಕ್ ಅವರೇ ಆಧಾರವಾಗಿದ್ದರು. ಆದರೆ ದೀಪಕ್ ಅಗಲಿಕೆಯಿಂದ ಈ ಕುಟುಂಬಕ್ಕೆ ಅನೇಕ ತೊಂದರೆಗಳು ಎದುರಾಗಿದ್ದವು. ದೀಪಕ್ ಮನೆಯ ನಂದಾ ದೀಪವೇ ಕತ್ತಲಾಗಿತ್ತು.
ಆದರೆ ಇದೀಗ ಕೇಂದ್ರ ಸ್ವಾಮ್ಯದ ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯಲ್ಲಿ ದೀಪಕ್ ಸಹೋದರ ಸತೀಶ್ ಅವರಿಗೆ ಕೆಲಸಕ್ಕೆ ಅವಕಾಶ ಸಿಕ್ಕಿದೆ. 28 ರ ಹರೆಯದ ಸತೀಶ್ ಪಣಂಬೂರಿನಲ್ಲಿರುವ ಕೆಐಒಸಿಎಲ್ ಕಂಪೆನಿಯಲ್ಲಿ ಮಾನವೀಯ ನೆಲೆಯಲ್ಲಿ ಕೆಲಸ ನೀಡಲು ಆಫರ್ ಬಂದಿದೆ.
ಇತ್ತೀಚೆಗೆ ದೀಪಕ್ ಮನೆಗೆ ಸಚಿವ ಅನಂತ್ಕುಮಾರ ಹೆಗಡೆ ಭೇಟಿ ನೀಡಿದ್ದ ವೇಳೆ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ ಕೆಲಸ ತೆಗೆಸಿಕೊಡುವ ಭರವಸೆ ನೀಡಿದ್ದರು. ಇದೀಗ ಸತೀಶ್ ಅವರಿಂದ ಅಗತ್ಯ ದಾಖಲೆಗಳನ್ನು ತರಿಸಿಕೊಂಡ ಕೆಐಓಸಿಎಲ್ ಅಧಿಕಾರಿಗಳು ಸತೀಶ್ ಅವರಿಗೆ ಖಾಯಂ ಉದ್ಯೋಗಕ್ಕೆ ಸಮ್ಮತಿಸಿದ್ದಾರೆ. ಒಂದು ವಾರದೊಳಗೆ ಉದ್ಯೋಗ ನೇಮಕಾತಿ ಪತ್ರ ಸತೀಶ್ ಕೈ ಸೇರುವ ನಿರೀಕ್ಷೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.