ಭಟ್ಕಳ,ಸೆ17: ಅಂಗಡಿಕಾರರ ತೆರವು ಕಾರ್ಯಾಚರಣೆಯ ವಿರುದ್ಧದ ಪ್ರತಿಭಟನೆಯ ವೇಳೆ ಪುರಸಭಾ ಕಚೇರಿಯ ಮೇಲೆ ನಡೆದ ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 7 ಜನರನ್ನು ಬಂಧಿಸಿದ್ದಾರೆ.
ಬಂಧಿತರನ್ನು ತಾಲೂಕಿನ ಹನುಮಾನ ನಗರದ ಈಶ್ವರ ದುರ್ಗಪ್ಪ ನಾಯ್ಕ (32), ಮಾಸ್ತಪ್ಪ ದುರ್ಗಪ್ಪ ನಾಯ್ಕ (32), ಶಂಕರ ವೆಂಕಟ್ರಮಣ ನಾಯ್ಕ ಕಂಡೆಕೊಡ್ಲು (40), ರಾಜೇಶ ನಾಗಪ್ಪ ನಾಯ್ಕ ಆಸರಕೇರಿ (42), ದಯಾನಂದ ಮಾದೇವ ದೇವಡಿಗ ಜೋಗಿಮನೆ ಮುಂಡಳ್ಳಿ ಎಂದು ಗುರುತಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳ ವಿರುದ್ಧ 143, 147, 148, 427 149 ಐಪಿಸಿ ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಪುರಸಭಾ ಕಚೇರಿಯ ಮೇಲಿನ ಕಲ್ಲು ತೂರಾಟ, ಸಿಬ್ಬಂದಿಗಳ ಮೇಲಿನ ಹಲ್ಲೆ, ಬೆದರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಪ್ರತಿಭಟನೆ ಹಾಗೂ ಕಲ್ಲು ತೂರಾಟ ಘಟನೆಯ ವಿಡಿಯೋ ದೃಶ್ಯಾವಳಿಯನ್ನು ಆಧರಿಸಿ ಆರೋಪಿಗಳ ಪತ್ತೆ ಕಾರ್ಯವನ್ನು ಆರಂಭಿಸಿದ್ದಾರೆ. ಮತ್ತೆ ಹಿಂಸಾತ್ಮಕ ಕೃತ್ಯ ಅಥವಾ ಪ್ರೇರಣೆಯಂತಹ ಘಟನೆ ನಡೆದರೆ ಕಾನೂನಿನ ಮೂಲಕವೇ ತಕ್ಕ ಉತ್ತರ ನೀಡುವುದಾಗಿ ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.