ಕುಂದಾಪುರ, ಫೆ 11: ಬೆಂಗಳೂರಿನಿಂದ ಕಾರವಾರಕ್ಕೆ ಬರುವ ಬದಲಿ ಮಾರ್ಗದ ರೈಲನ್ನು ಕುಂದಾಪುರ ರೈಲು ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಈ ಹಿಂದೆ ಬೆಂಗಳೂರು ಕಾರವಾರ ಮಾರ್ಗದ ರೈಲು ಮೈಸೂರಿನ ಮೂಲಕ ಸಂಚರಿಸುತ್ತಿದ್ದು, ನೂತನವಾಗಿ ಆರಂಭಗೊಂಡ ಶ್ರವಣಬೆಳಗೊಳ ಮಾರ್ಗವಾಗಿ ಬದಲಿಸಲು ಹಲವು ವರ್ಷಗಳ ಹೋರಾಟವನ್ನ ಜೈಭಾರ್ಗವ ಸಂಘಟನೆ ಮತ್ತು ರೈಲ್ವೆ ಹಿತರಕ್ಷಣಾ ಸಮಿತಿಯ ಸದಸ್ಯರು ನಡೆಸಿದ್ದರು. ಈ ಹಿನ್ನೆಲೆ 2017 ರ ನವೆಂಬರ್ ತಿಂಗಳಿನಲ್ಲಿ ನೋಟಿಫಿಕೇಶನ್ ಜಾರಿಗೊಳಿಸಿ ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ ಬೆಂಗಳೂರಿನಿಂದ ಶ್ರವಣಬೆಳಗೊಳ ಮಾರ್ಗವಾಗಿ ಕಾರವಾರಕ್ಕೆ ಇನ್ನುಳಿದ ದಿನಗಳು ಮೈಸೂರು ಮಾರ್ಗವಾಗಿ ಕಾರವಾರಕ್ಕೆ ಬರುವ ವೇಳಾಪಟ್ಟಿ ನಿಗದಿಗೊಳಿಸಲಾಗಿತ್ತು. ನೂತನ ವೇಳಾಪಟ್ಟಿಯಿಂದ ಬೆಂಗಳೂರಿನಿಂದ ಕಾರವಾರಕ್ಕೆ ಬರುವ ಪ್ರಯಾಣದ ಸಮಯ ಸುಮಾರು 6 ಗಂಟೆಯಷ್ಟು ಕಡಿತಗೊಂಡಿದೆ.
ಮುಂಜಾನೆ 9.15 ಕ್ಕೆ ಕುಂದಾಪುರಕ್ಕೆ ಬಂದ ರೈಲುಗಾಡಿಯನ್ನ ಕುಂದಾಪುರ ರೈಲ್ವೇ ನಿಲ್ದಾಣದಲ್ಲಿ ವಾದ್ಯಘೋಷಗಳೊಂದಿಗೆ ರೈಲ್ವೆ ಹಿತರಕ್ಷಣಾ ಸಮಿತಿಯ ಸದಸ್ಯರು ಹೂವನ್ನು ಹಾಕಿ ಸ್ವಾಗತಿಸಿದರು. ಈ ಸಂದರ್ಭ ಮಾತನಾಡಿದ ರೈಲ್ವೇ ಹಿತರಕ್ಷಣಾ ಸಮಿತಿಯ ಸದಸ್ಯರಾದ ವಿವೇಕ್, ಈ ರೈಲುಗಾಡಿ ಉದ್ಯೋಗಸ್ಥರಿಗೆ ಬಹಳ ಅನುಕೂಲಕರವಾಗಿದ್ದು, ನೂತನ ವೇಳಾಪಟ್ಟಿಯಿಂದ ರೈಲ್ವೇ ಪ್ರಯಾಣಿಕರ ಸಮಯ ವ್ಯರ್ಥವಾಗುವುದು ತಪ್ಪಿದೆ. ಈ ರೈಲು ಶ್ರವಣಬೆಳಗೋಳ ಮೂಲಕ ಬೆಂಗಳೂರು ತಲುಪುವುದರಿಂದ ಉದ್ಯೋಗಸ್ಥರಿಗೆ ನಿಗದಿತ ಸಮಯದಲ್ಲಿ ಕಾರ್ಯಕ್ಷೇತ್ರ ತಲುಪಲು ಸಾಧ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭ ಹಿರಿಯರಾದ ಅಪ್ಪಣ್ಣ ಹೆಗ್ಡೆ, ರೈಲ್ವೆ ಹಿತರಕ್ಷಣ ಸಮಿತಿಯ ಅಧ್ಯಕ್ಷರಾದ ಸೋಮಶೇಖರ ಶೆಟ್ಟಿ, ಜಿ.ಪಂ ಸದಸ್ಯರಾದ ಲಕ್ಷ್ಮೀ ಮಂಜು ಬಿಲ್ಲವ, ಜ್ಯೋತಿ ಎಂ ನಾಯಕ್, ರೈಲ್ವೇ ಸಮಿತಿ ಸಂಚಾಲಕ ವಿವೇಕ್ ನಾಯ್ಕ, ಜೋಯ್ ಜೆ. ಕರ್ವಾಲ್ಲೋ, ಕೀಶೋರ್ ಕುಮಾರ್ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪದಾದಿಕಾರಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.