ಉಡುಪಿ, ಫೆ 11 : ಯಾವುದೋ ಕಾರಣದಿಂದ ತನ್ನ ಎರಡೂ ಕಣ್ಣಿನ ದೃಷ್ಟಿ ಕಳಕೊಂಡ ಬಿಳಿ ಕತ್ತಿನ ಗರುಡ ( ಬ್ರಾಹ್ಮಿಣಿ ಕೈಟ್ಸ್) ಪಕ್ಷಿಗೆ ಉಡುಪಿಯ ಪ್ರಸಾದ್ ನೇತ್ರಾಲಯದಲ್ಲಿ ಚಿಕಿತ್ಸೆ ನೀಡಿದ ನೀಡುತ್ತಿರುವ ಅಪರೂಪದ ಘಟನೆ ಉಡುಪಿಯಲ್ಲಿ ನಡೆದಿದೆ.
ಪೆ. 9 ರಂದು ಉಡುಪಿ ಪೇಜಾವರ ಮಠದ ಬಳಿ ಇರುವ ಮರದಿಂದ ಗರುಡ ಪಕ್ಷಿ ಮರದಿಂದ ಕೆಳಕ್ಕೆ ಬಿದ್ದಿದೆ. ಇದನ್ನು ಗಮನಿಸಿದ ಪೇಜಾವರ ಕಿರಿಯ ಯತಿ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಆರೈಕೆ ಮಾಡಿ ಬಳಿಕ ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ ಡಾ| ಕೃಷ್ಣ ಪ್ರಸಾದ್ ಅವರನ್ನು ಸಂಪರ್ಕಿಸಿ ದೃಷ್ಟಿ ಕಳೆದುಕೊಂಡ ಗರುಡನಿಗೆ ಚಿಕಿತ್ಸೆ ನೀಡುವಂತೆ ಕೋರಿದ್ದಾರೆ. ಅದರಂತೆ ಫೆ. 10 ರಂದು ಗರುಡ ಪಕ್ಷಿಯನ್ನು ಕೊಂಡೊಯ್ದು ವೈದ್ಯರ ತಂಡದಿಂದ ಪರೀಕ್ಷೆಗೆ ಒಳಪಡಿಸಲಾಯಿತು. ಪಕ್ಷಿಯು ವಿದ್ಯುತ್ ತಂತಿಗೆ ಸಿಲುಕಿ ಅಘಾತ ಅಥವಾ ಆಂತರಿಕ ಒತ್ತಡದಿಂದ ಕಣ್ಣಿನ ಕಪ್ಪುಗುಡ್ಡೆ ಬೆಳ್ಳಗಾಗಿರುವುದು, ಈ ಎರಡರಲ್ಲಿ ಯಾವುದಾದರೊಂದು ಕಾರಣಗಳಿಂದ ಪಕ್ಷಿ ಕಣ್ಣು ಕಳೆದು ಕೊಂಡಿರಬಹುದು ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಕಣ್ಣಿನ ಕಪ್ಪುಗುಡ್ಡೆ ಶುದ್ದಗೊಳಿಸುವ ಹಾಗೂ ಕಣ್ಣಿನ ಒತ್ತಡ ಕಡಿಮೆ ಮಾಡುವ ಔಷದವನ್ನು ಸುಮಾರು 15 ದಿನಗಳ ಕಾಲ ಹಾಕಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಈಗಾಗಲೇ ಪಕ್ಷಿಯ ಚಿಕಿತ್ಸೆಗಾಗಿ ಅರಣ್ಯ ಇಲಾಖೆಯಿಂದ ಒಪ್ಪಿಗೆ ಪಡೆಯಲಾಗಿದ್ದು, ಒಂದು ವೇಳೆ ಡ್ರಾಪ್ಸ್ ನಿಂದ ಪಕ್ಷಿಗೆ ದೃಷ್ಟಿ ಮರಳದಿದ್ದರೆ ಗರುಡನಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕಾಗುತ್ತದೆ ಅಲ್ಲದೆ ಗರುಡ ಪಕ್ಷಿಯ ಕಣ್ಣಿಗೆ ಲೆನ್ಸ್ ಹಾಕಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಪಕ್ಷಿಯ ಚಿಕಿತ್ಸೆಗಾಗಿ ಪ್ರತ್ಯೇಕ ಚಿಕಿತ್ಸಾಪರಿಕರ
ಮನುಷ್ಯರ ಕಣ್ಣಿನ ಗಾತ್ರಕ್ಕಿಂದ ಚಿಕ್ಕದಾಗಿರುವ ಗರುಡನಿಗೆ ನ್ಯಾನೋ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ. ಪ್ರತೇಕ ಪರಿಕರಗಳನ್ನು ಸಿದ್ದತೆ ಮಾಡಿಕೊಳ್ಳಬೇಕಾಗಿದೆ ಗರುಡನಿಗೆ ವಿಶೇಷ ಸ್ಥಾನಮಾನ ಇರುವುದರಿಂದ ಚಿಕಿತ್ಸೆಯ ಸಂಪೂರ್ಣವೆಚ್ಚವನ್ನು ಆಸ್ಪತ್ರೆಯಿಂದಲೇ ಭರಿಸಲಾಗುವುದೆಂದು ಕೃಷ್ಣಪ್ರಸಾದ್ ಭರವಸೆ ನೀಡಿದ್ದಾರೆ.