ಮಂಡ್ಯ, ಫೆ 10: ವೈದ್ಯರು ನೀಡಿದ ಚುಚ್ಚುಮದ್ದಿನಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಗಂಭೀರ ಆರೋಪ ಮಂಡ್ಯದಲ್ಲಿ ಶನಿವಾರ ಕೇಳಿಬಂದಿದೆ. ಈ ಘಟನೆಯಿಂದ ರಾಜ್ಯವೇ ಬೆಚ್ಚಿಬಿದ್ದಿದ್ದು, ಇನ್ನು ಐದು ಹಸುಗೂಸುಗಳ ಸ್ಥಿತಿ ಚಿಂತಾಜನಕವಾಗಿದೆ. . ಈ ಎಲ್ಲ ಮಕ್ಕಳು ಒಂದರಿಂದ ಎರಡು ತಿಂಗಳ ಹಸುಳೆಗಳು ಎಂದು ತಿಳಿದುಬಂದಿದೆ.
ಮಂಡ್ಯದ ಚಿಂದಗಿರಿ ದೊಡ್ಡಿಯಲ್ಲಿ ಈ ಘಟನೆ ನಡೆದಿದ್ದು, ವೈದ್ಯರು ನೀಡಿದ PENTA ಚುಚ್ಚುಮದ್ದಿನಿಂದಲೇ ಮಕ್ಕಳು ಸಾವನಪ್ಪಿದ್ದಾರೆಂದು ಮಕ್ಕಳ ಪೋಷಕರು ದೂರಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಐದು ಹಸುಗೂಸುಗಳನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಈ ಎಲ್ಲಾ ಆರೋಪ ನಿರಾಕರಿಸಿರುವ ವೈದ್ಯರು, ಪೆಂಟಾ ಇಂಜೆಕ್ಷನ್ನಿಂದ ಮಕ್ಕಳು ಮೃತಪಟ್ಟಿದ್ದಾರೆ ಎಂಬುದು ಧೃಡಪಟ್ಟಿಲ್ಲ ಎಂದು ಹೇಳಿದ್ದಾರೆ . ಇನ್ನು ಈ ಘಟನೆ ಬಗ್ಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ರಮೇಶ್ ಕುಮಾರ್ ಹಸುಗೂಸುಗಳ ಸಾವಿನ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಒಂದು ವೇಳೆ ತನಿಖೆ ಸಂದರ್ಭ ವೈದ್ಯರ ನಿರ್ಲಕ್ಷ್ಯ ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.