ಮಂಗಳೂರು, ಫೆ 9: ಕರಾವಳಿ ಜಿಲ್ಲೆಗೆ ಅಮಿತ್ ಷಾ ಬರಲಿ ಆದರೆ ಇಲ್ಲಿನ ಹಿಂದೂ – ಮುಸ್ಲಿಂ ನಡುವಿನ ಸೌಹಾರ್ದತೆ ಹಾಳು ಮಾಡಿಸುವ ಕೆಲಸಕ್ಕೆ ಕೈ ಹಾಕಬೇಡಿ ಎಂದು ಸಚಿವ ಖಾದರ್ ಮನವಿ ಮಾಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರಾವಳಿಯಲ್ಲಿ ಹಿಂದೂ ಮತ್ತು ಮುಸ್ಲಿಮರು ಸಹೋದರರಂತೆ ಇದ್ದಾರೆ. ಸೌಹಾರ್ದತೆಯಿಂದ ಕೂಡಿ ಬಾಳುತ್ತಿದ್ದಾರೆ. ಆದರೆ ಅಮಿತ್ ಷಾ ಆಗಮನದಿಂದ ಜಿಲ್ಲೆಯಲ್ಲಿ ಸೌಹಾರ್ದ ಕದಡುವ ಕೆಲಸ ಆಗದಿರಲಿ ಎಂದು ವಿನಂತಿಸಿದ್ದಾರೆ.
ಇದೇ ಮೊದಲ ಬಾರಿ ಬಿಜೆಪಿ ಪಕ್ಷದ ರಾಷ್ಟ್ರಧ್ಯಕ್ಷ ಅಮಿತ್ ಷಾ ಕರಾವಳಿಗೆ ಭೇಟಿ ನೀಡಲಿದ್ದಾರೆ. ಅವರು ಕರಾವಳಿ ಜಿಲ್ಲೆಗೆ ಆಗಮಿಸುವುದು ಸಂತಸದ ವಿಷಯ. ಅವರನ್ನು ನಾವು ಪ್ರೀತಿಯಿಂದ ಸ್ವಾಗತಿಸುತ್ತೇವೆ. ಇವರ ಆಗಮನ ಕಾಂಗ್ರೆಸ್ ಕರಾವಳಿಯಲ್ಲಿ ಎಷ್ಟು ಬಲಿಷ್ಠವಾಗಿದೆ ಅನ್ನೋದನ್ನು ತೋರಿಸುತ್ತದೆ. ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಷಾ ಕರಾವಳಿ ಜಿಲ್ಲೆಗೆ ಭೇಟಿ ನೀಡಲು ಕರಾವಳಿಯಲ್ಲಿನ ಕಾಂಗ್ರೆಸ್ ಪ್ರಭಾವವೇ ಕಾರಣ ಎಂದು ಹೇಳಿದ್ದಾರೆ.
ರಾಜ್ಯದ ಯಾವುದೇ ಬಿಜೆಪಿ ನಾಯಕರಿಂದ ಇಲ್ಲಿ ಯಾವುದೇ ಕೆಲಸ ಆಗಲ್ಲ ಎಂಬ ಕಾರಣಕ್ಕೆ ಅಮಿತ್ ಷಾ ಕರಾವಳಿಗೆ ಆಗಮಿಸುತ್ತಿದ್ದಾರೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲರೂ ಶಾಂತಿ, ಸೌಹಾರ್ದತೆ, ಕೋಮು ಸಾಮರಸ್ಯ, ಒಗ್ಗಟ್ಟಿನಲ್ಲಿದ್ದೇವೆ. ಅಮಿತ್ ಷಾ ಆಗಮಿಸಿ ಇಲ್ಲಿ ಪ್ರಚಾರ ಮಾಡಿ, ಹಿಂದೂ, ಮುಸ್ಲಿಂ ಕ್ರಿಶ್ಚಿಯನ್ ಸಮುದಾಯದ ಐಕ್ಯತೆಯನ್ನು ಬೇರ್ಪಡಿಸುವುದು ಬೇಡ ಎಂದು ಖಾದರ್ ಮನವಿ ಮಾಡಿದ್ದಾರೆ.