ಬೆಂಗಳೂರು, ಫೆ 8: ರಾಜ್ಯದಲ್ಲಿ ಪಿಎಫ್ಐ, ಎಸ್ಡಿಪಿಐ ನಿಷೇಧಿಸುವುದಾದರೆ, ವಿಎಚ್ಪಿ, ಬಜರಂಗದಳ ಸಂಘಟನೆಗಳನ್ನೂ ಕೂಡ ನಿಷೇಧ ಮಾಡಬೇಕಾಗುತ್ತದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವಿಧಾನ ಪರಿಷತ್ತಿನಲ್ಲಿ ಪ್ರತಿಪಾದಿಸಿದ್ದಾರೆ.
ಪಿಎಫ್ಐ, ಎಸ್ಡಿಪಿಐ ಸಂಘಟನೆಗಳಿಂದ ಯಾವ ರೀತಿ ಹತ್ಯೆಗಳು ನಡೆದಿದೆಯೋ, ಅದೇ ರೀತಿ ರಾಜ್ಯದ ಒಟ್ಟು 13 ಹತ್ಯೆಗಳಲ್ಲಿ ವಿಎಚ್ಪಿ ಮತ್ತು ಬಜರಂಗದಳ ಭಾಗಿಯಾಗಿವೆ. ಹೀಗಾಗಿ, ಅವರು ಮಾಡಿದ್ದು ಸರಿ, ಇವರು ಮಾಡಿದ್ದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಪಿಎಫ್ಐ, ಎಸ್ಡಿಪಿಐ ನಿಷೇಧ ಮಾಡುವುದಾದರೆ ಸಂಘ ಪರಿವಾರದ ಸಂಘಟನೆಗಳಿಗೂ ಈ ತೀರ್ಮಾನ ಅನ್ವಯವಾಗಬೇಕಾಗುತ್ತದೆ ಎಂದು ವಾದಿಸಿದ್ದಾರೆ.
ಬಿಜೆಪಿಯವರು ಆರೋಪಿಸುವಂತೆ ಎಲ್ಲ ಕೊಲೆಗಳೂ ಕೋಮು ದ್ವೇಷದಿಂದ ನಡೆದಿಲ್ಲ. 14 ಪ್ರಕರಣಗಳಲ್ಲಿ ಹಿಂದೂ ಕೊಲೆಗಳು ಹಿಂದೂಗಳಿಂದಲೇ ನಡೆದಿವೆ. ಈ ಎಲ್ಲ ಪ್ರಕರಣಗಳಲ್ಲೂ ಆರೋಪಿಗಳನ್ನು ಬಂಧಿಸಿ ಚಾರ್ಜ್ಶೀಟ್ ಹಾಕಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 23 ಹಿಂದೂಗಳ ಹತ್ಯೆಯಾಗಿದೆ ಎಂಬ ಬಿಜೆಪಿ ನಾಯಕರ ಆಪಾದನೆ ಸುಳ್ಳು. ಕೇಂದ್ರ ಗೃಹ ಸಚಿವರಿಗೆ ಸಂಸದೆ ಶೋಭಾ ಕರಂದ್ಲಾಜೆ ಸಲ್ಲಿಸಿರುವ ಈ 23 ಜನರ ಪಟ್ಟಿಯಲ್ಲಿರುವ ಅಶೋಕ್ ಪೂಜಾರಿ ಬದುಕಿದ್ದಾರೆ. ಆತ್ಮಹತ್ಯೆ, ರಸ್ತೆ ಅಪಘಾತ, ಆಸ್ತಿ ವಿವಾದದ ಸಾವು, ವೈಯಕ್ತಿಕ ದ್ವೇಷದಿಂದ ನಡೆದಿರುವ ಒಟ್ಟು 12 ಪ್ರಕರಣಗಳನ್ನೂ ಕೋಮುಗಲಭೆಗೆ ತಳಕು ಹಾಕಲಾಗಿದೆ ಎಂದು ತಿಳಿಸಿದರು.
ಹಿಂದೂಗಳ ಹತ್ಯೆ ನಡೆಯುತ್ತಿದೆ ಎಂದು ಆರೋಪಿಸುವ ಬಿಜೆಪಿಯವರು ಮೂಡಿಗೆರೆಯಲ್ಲಿ ಧನ್ಯಶ್ರೀ ಸಾವಿಗೆ ಕಾರಣನಾದ ಬಿಜೆಪಿ ಯುವಮೋರ್ಚಾ ಅಧ್ಯಕ್ಷನ ವಿಚಾರದಲ್ಲಿ ಏಕೆ ಪ್ರತಿಭಟನೆ ಮಾಡಲಿಲ್ಲ, ದಾನಮ್ಮನ ಅತ್ಯಾಚಾರ ಮತ್ತು ಕೊಲೆಯಲ್ಲಿ ಭಾಗಿಯಾದವನ ವಿರುದ್ಧ ಏಕೆ ತುಟಿ ಬಿಚ್ಚಲಿಲ್ಲ ಎಂದು ಪ್ರಶ್ನಿಸಿದರು.