ಬೆಂಗಳೂರು, ಫೆ 08: ಹಿಂದೂ ಮಠಗಳು, ಸಂಬಂಧಿಸಿದ ದೇವಸ್ಥಾನಗಳು ಧಾರ್ಮಿಕ ಸಂಸ್ಥೆಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಬೇಕೆ ಅಥವಾ ಬೇಡವೇ ಎಂದು ಅಭಿಪ್ರಾಯ ಕೋರಿ ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿರುವ ಪ್ರಕಟಣೆ ಬಹಿರಂಗವಾಗುತ್ತಿದ್ದಂತೆ ವಿವಿಧ ಧಾರ್ಮಿಕ ಸಂಸ್ಥೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಗುರುವಾರ ನಡೆದ ವಿಧಾನಪರಿಷತ್ನ ಕಲಾಪದಲ್ಲಿ ಸ್ಪಷ್ಟನೆ ನೀಡಿದ್ದಾರೆ. ನಾವು ಜನಗಳ ಅಭಿಪ್ರಾಯ ಕೇಳಿ ಸುತ್ತೋಲೆ ಹೊರಡಿಸಿರುವುದು ನಿಜ ಆದರೆ ಈಗ ಆ ಪ್ರಸ್ತಾವನೆಯನ್ನು ಕೈಬಿಟ್ಟಿದ್ದೇವೆ.ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ' ಎಂದು ತಿಳಿಸಿದರು.ಅದು ಪ್ರಕಟಣೆಯೇ ಹೊರತು ಸೂಚನೆಯೂ ಅಥವಾ ಆದೇಶವೂ ಅಲ್ಲ. ಪ್ರಕಟಣೆಯನ್ನೂ ವಾಪಾಸ್ ತೆಗೆದುಕೊಳ್ಳುತ್ತೇವೆ ಎಂದರು. ಬೇರೆಯವರ ಮಠ ದೇಗುಲಗಳನ್ನು ಪಡೆದು ಏನು ಮಾಡೋದು. ನಾವು ಮುಜರಾಯಿ ಇಲಾಖೆಗೆ ಸಂಬಂಧಿಸಿದ ದೇವಾಲಯಗಳನ್ನು ಮಾತ್ರ ನೋಡಿಕೊಳ್ಳುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಈ ಸುತ್ತೋಲೆ ವಿಪಕ್ಷಗಳ ಕೈಗೆ ಅಸ್ತ್ರ ವಾಗಿ ದೊರಕಿದ್ದು ಇಂದು ಕಲಾಪದಲ್ಲಿ ಸರರ್ಕಾರವನ್ನು ಬಿಜೆಪಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.