ವರದಿ: ತೇಜಸ್ ಸುಳ್ಯ
ಸುಳ್ಯ , ಫೆ 08 : ರುದ್ರಭೂಮಿ ಅಂದಾಕ್ಷಣ ಕಣ್ಣಿಗೆ ಕಾಣುವ ಚಿತ್ರಣ ಭಯ ಮಿಶ್ರಿತ ಪರಿಸರ. ಮನುಷ್ಯ ಜೀವಂತವಿರುವಾಗಲೇ ಎಲ್ಲ. ’ ಸತ್ತ ಮೇಲೆ ಏನಿಲ್ಲ’ ಇದು ಗಾದೆ ಮಾತು. ಸತ್ತ ಮೇಲೆ ಶವ ಸುಡುವ ಸ್ಮಶಾನದ ಕಲ್ಪನೆ ಹಿಂದೆ ಒಂದು ರೀತಿ ಇದ್ದರೆ ಇಂದು ಬೇರೆ ರೀತಿ. ಸ್ಮಶಾನವೂ ಸಕಲ ಸೌಕರ್ಯ ಹೊಂದಿರುವ ಉದ್ಯಾನವನವಾಗಿದ್ದರೆ ದುಖಃತಪ್ತ ಮನಸ್ಸಿಗೆ ಸಾಂತ್ವನ ಹೇಳುವಂತಹ ವಾತಾವರಣ. ಇಂತಹ ವಿಶಿಷ್ಠ ರೀತಿಯ ರುದ್ರಭೂಮಿ ಉದ್ಘಾಟನೆಗೆ ಸಜ್ಜುಗೊಂಡಿರುವುದು ಸುಳ್ಯದ ಕೊಡಿಯಾಲಬೈಲಿನಲ್ಲಿ .
ಕೊಡಿಯಾಲಬೈಲು, ಸುಳ್ಯ ಮತ್ತು ಉಬರಡ್ಕ ಗ್ರಾಮಗಳ ಗಡಿಯಲ್ಲಿರುವ ಪ್ರದೇಶ. ಇಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಸ್ಮಶಾನಕ್ಕೆಂದು 50 ಸೆಂಟ್ಸ್ ಸ್ಥಳ ಮೀಸಲಾಗಿರಿಸಲಾಗಿತ್ತು. ಇದರಲ್ಲಿ ಯೋಜಿತವಾದ ಸುಂದರ ಸ್ಮಶಾನ ನಿರ್ಮಾಣಗೊಳ್ಳುತ್ತಿದೆ. ಶವ ಸುಡಲು ಎರಡು ಸಿಲಿಕಾನ್ ಛೇಂಬರ್ಗಳು, ಬಂದವರಿಗೆ ಕರ್ಮ ನಿರ್ವಹಿಸಲು ಸ್ಥಳಾವಕಾಶ, ಕಟ್ಟಡ, ಕಚೇರಿ ಕಟ್ಟಡ, ಸಮುದಾಯ ಶೌಚಾಲಯ, ಸ್ನಾನಗೃಹ, ಸುತ್ತಲೂ ಆವರಣ ಗೋಡೆ, ಅದರೊಳಗಡೆ 14 ಅಡಿ ಅಗಲದ ಇಂಟರ್ಲಾಕ್ ಅಳವಡಿಸಿದ ರಸ್ತೆಗಳು, ಈ ರಸ್ತೆಯ ಇಕ್ಕೆಲಗಳಲ್ಲಿ ಹೂದೋಟ, ನಡುವೆ ಸ್ಮಶಾನಾಧಿಪತಿ ಪರಮೇಶ್ವರನ ಬೃಹತ್ ವಿಗ್ರಹ, ಅದರ ಸುತ್ತಲೂ ನೀರಿನ ಕಾರಂಜಿ, ಕೊಳ, ಉದ್ಯಾನವನದಲ್ಲಿ ಸ್ಮಶಾನ ಕಾಯುವವನಾಗಿ ಕಾರ್ಯನಿರ್ವಹಿಸಿದ ಸತ್ಯಹರಿಶ್ಚಂದ್ರನ ವಿಗ್ರಹ, ಕೊಡಿಯಾಲಬೈಲು ವಿಷ್ಣುಮೂರ್ತಿ ದೈವಸ್ಥಾನದ ಬಳಿಯಿಂದ ಸ್ಮಶಾನದವರೆಗೆ 136 ಅಡಿ ಉದ್ದದ ಕಾಂಕ್ರೀಟ್ ರಸ್ತೆ, ಸ್ಮಶಾನದೊಳಗೆ ನೀರಿನ ವ್ಯವಸ್ಥೆಗಾಗಿ ಬೋರ್ವೆಲ್ ಮತ್ತು ನೀರಿನ ಶೇಖರಣೆಗೆ ಟ್ಯಾಂಕರ್ - ಹೀಗೇ ಎಲ್ಲಾ ವ್ಯವಸ್ಥೆಗಳಿರುವ ಸ್ಮಶಾನ ಈಗ ಪೂರ್ಣಗೊಳ್ಳುತ್ತಿದ್ದು, ಫೆ. 10 ರಂದು ಲೋಕಾರ್ಪಣೆಗೊಳ್ಳುವ ಸಿದ್ಧತೆಯಲ್ಲಿದೆ.
ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ಈ ಎಲ್ಲಾ ಕಾಮಗಾರಿಗಳು ನಡೆಯುತ್ತಿದ್ದು, ಆವರಣ ಗೋಡೆ , ಪ್ರವೇಶದ್ವಾರ ಆಗಿದೆ. 4 ಬಗೆಯ ಕಟ್ಟಡಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಈಶ್ವರ ಮತ್ತು ಹರಿಶ್ಚಂದ್ರರ ವಿಗ್ರಹ ಅಳವಡಿಸಲಾಗಿದೆ. ಬೋರ್ವೆಲ್ ಕೊರೆದಾಗಿದೆ. ಸಾಕಷ್ಟು ನೀರೂ ದೊರೆತಿದೆ. ಕಾಂಕ್ರಿಟ್ ರಸ್ತೆಯ ಕಾಮಗಾರಿಯೂ ಪೂರ್ಣಗೊಂಡಿದೆ. ಉದ್ಯಾನವನದ ನಿರ್ಮಾಣ ಮತ್ತು ಒಳಗಡೆ ಇಂಟರ್ಲಾಕ್ ರಸ್ತೆ ನಿರ್ಮಾಣ ಆಗಬೇಕಾಗಿದೆ. ಲಯನ್ಸ್ ಜಿಲ್ಲೆ 317 ಡಿ ಪ್ರಾಂತ-4ರ ವತಿಯಿಂದ ರೀಜನಲ್ ಚೇರ್ಮೆನ್ ಲ.ಜಯರಾಮ ದೇರಪ್ಪಜ್ಜನಮನೆಯವರ ನೇತೃತ್ವದಲ್ಲಿ 5 ಲಕ್ಷ ರೂ. ಇದಕ್ಕಾಗಿ ವಿನಿಯೋಗಿಸುತ್ತಿದ್ದಾರಾದರೆ, ಉಬರಡ್ಕ ಗ್ರಾಮ ಪಂಚಾಯತ್ ವತಿಯಿಂದ ಅಧ್ಯಕ್ಷ ಹರೀಶ್ ಉಬರಡ್ಕರವರು ಉದ್ಯೋಗ ಖಾತರಿ ಯೋಜನೆ, ಶಾಸಕರ ನಿಧಿ, ಸರಕಾರದ ಇತರ ನಿಧಿಗಳನ್ನು ಒಟ್ಟು ಸೇರಿಸಿ 30 ಲಕ್ಷದಷ್ಟು ಅನುದಾನ ಒಟ್ಟುಗೂಡಿಸಲು ಶ್ರಮ ಪಡುತ್ತಿದ್ದಾರೆ. ಅಲ್ಲದೆ ಅನುದಾನ ತರಿಸಿಕೊಳ್ಳುವ ಆತ್ಮವಿಶ್ವಾಸದಲ್ಲಿ ತಾನೇ ಮುಂದೆ ನಿಂತು ಕೆಲಸ ಮಾಡಿಸುತ್ತಿದ್ದಾರೆ.
ಸ್ಮಶಾನದ ಸಂಪೂರ್ಣ ನೀಲಿನಕ್ಷೆಯನ್ನು ಪ್ರಾಂತೀಯ ಅಧ್ಯಕ್ಷ ಜಯರಾಂ ದೇರಪ್ಪಜ್ಜನಮನೆ ಹಾಗೂ ಲಯನ್ಸ್ ರೀಜನ್ -4 ಕಾನ್ಫರೆನ್ಸ್ ಕಮಿಟಿ ಚೇರ್ಮೆನ್ ಪಿ.ಎಂ.ರಂಗನಾಥ್ರವರು, ಲಯನ್ಸ್ ಕ್ಲಬ್ ಸದಸ್ಯರೂ ಆಗಿರುವ ಗ್ರಾ.ಪಂ. ಅಧ್ಯಕ್ಷ ಪ್ರಾಜೆಕ್ಟ್ ಡೈರೆಕ್ಟರ್ ಲ. ಹರೀಶ್ ಉಬರಡ್ಕರ ಜತೆ ಸೇರಿ ತಯಾರಿಸಿದ್ದು, ಲ.ಪಿ.ಎಂ. ರಂಗನಾಥರು ಕೆಲಸದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಲ.ದಯಾನಂದ ಡಿ.ಟಿ.ಯವರು ಕೆಲಸದ ಉಸ್ತುವಾರಿ ವಹಿಸಿದ್ದಾರೆ.
ಈ ಸ್ಮಶಾನ ಪೂರ್ಣಗೊಂಡು ಕಾರ್ಯಾರಂಭಿಸಿದ ಮೇಲೆ ಸುಳ್ಯ ಗ್ರಾಮದವರು ಮತ್ತು ಉಬರಡ್ಕ ಗ್ರಾಮದವರು ಇಲ್ಲಿಗೇ ಬಂದು ಅಂತ್ಯ ಸಂಸ್ಕಾರ ನೆರವೇರಿಸಿಕೊಳ್ಳುವ ಚಿಂತನೆ ನಡೆಸುವುದು ಖಂಡಿತ. ಅಷ್ಟು ಸುಂದರವಾಗಿ ಈ ರುದ್ರಭೂಮಿ ಕಂಗೊಳಿಸಲಿದೆ.
“ಇಲ್ಲಿ ಸ್ಮಶಾನ ನಿರ್ಮಾಣಕ್ಕಾಗಿ 50 ಸೆಂಟ್ಸ್ ಸ್ಥಳವನ್ನು ಹಲವು ವರ್ಷಗಳ ಹಿಂದೆಯೇ ಕಾದಿರಿಸಲಾಗಿತ್ತು. ಇದರ ಪಕ್ಕದಲ್ಲಿಯೇ ಜನವಸತಿ ಪ್ರದೇಶವಿದೆ. ಆದ್ದರಿಂದ ಲಯನ್ಸ್ನ ಸಹಯೋಗದೊಂದಿಗೆ ಸುಂದರವಾದ ಮತ್ತು ಸುಸಜ್ಜಿತವಾದ ಸ್ಮಶಾನ ನಿರ್ಮಿಸುವ ಕಾರ್ಯಕ್ಕೆ ಮುಂದಾದೆವು. ಲಯನ್ಸ್ನಿಂದ 5 ಲಕ್ಷ ರೂ. ನೀಡುತ್ತಾರೆ. ಕಾಮಗಾರಿಯ ಉಸ್ತುವಾರಿ ವಹಿಸಿದ್ದಾರೆ. ಒಟ್ಟು 30 ಲಕ್ಷ ಎಸ್ಟಿಮೇಟ್ ನಮ್ಮದಾಗಿತ್ತು. ಆದರೆ ಈಗ ನೋಡುವಾಗ 35 ಲಕ್ಷ ರೂ. ಬೇಕಾಗುತ್ತದೆ. ಕೆಲಸ ಆರಂಭಿಸಿ ಆಗಿದೆ. ಹಣಕ್ಕಾಗಿ ಎಲ್ಲಾ ಕಡೆಯಿಂದ ಹೊಂದಿಸುವ ಕಾರ್ಯಮಾಡುತ್ತಿನೆ. ಈ ಸ್ಮಶಾನವನ್ನು ನಿರಂತರವಾಗಿ ಸರಿಯಾಗಿ ನಿರ್ವಹಣೆ ಮಾಡಲು ಸಿಬ್ಬಂದಿಯೊಬ್ಬರನ್ನು ಪಂಚಾಯತ್ ವತಿಯಿಂದ ನೇಮಿಸಬೇಕೆಂದಿದ್ದೇವೆ. ನಿರ್ವಹಣೆಯ ಮೇಲುಸ್ತುವಾರಿ ನೋಡಿಕೊಳ್ಳಲು ಸಮಿತಿ ರಚಿಸಬೇಕೆಂದಿದೆ. ಶವ ಸುಡಲು ಕಟ್ಟಿಗೆ ಇಲ್ಲೇ ದೊರೆಯುವ ವ್ಯವಸ್ಥೆ ಮಾಡುತ್ತೇವೆ. ಕಟ್ಟಿಗೆ ಮತ್ತು ನಿರ್ವಹಣೆಯ ವೆಚ್ಚಕ್ಕಾಗಿ ಶವಸಂಸ್ಕಾರಕ್ಕೆ ಶುಲ್ಕ ನಿಗದಿ ಪಡಿಸುತ್ತೇವೆ". - ಹರೀಶ್ ಉಬರಡ್ಕ , ಅಧ್ಯಕ್ಷರು, ಉಬರಡ್ಕ ಗ್ರಾ.ಪಂ.,