ಉಡುಪಿ, ಫೆ 08 : ಹಿಂದೂ ಮಠಗಳು, ಸಂಬಂಧಿಸಿದ ದೇವಸ್ಥಾನಗಳು ಧಾರ್ಮಿಕ ಸಂಸ್ಥೆಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಬೇಕೆ ಅಥವಾ ಬೇಡವೇ ಎಂದು ಅಭಿಪ್ರಾಯ ಕೋರಿ ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿರುವ ಪ್ರಕಟಣೆ ಬಹಿರಂಗವಾಗುತ್ತಿದ್ದಂತೆ ವಿವಿಧ ಧಾರ್ಮಿಕ ಸಂಸ್ಥೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸಿದ್ದರಾಮಯ್ಯ ಸರಕಾರ ಮಠ, ಮಾನ್ಯ, ಬಸದಿ, ಮತ್ತಿತ್ತರ ಧಾರ್ಮಿಕ ವಿಷಯಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದು ತಕ್ಕ ಬೆಲೆ ತೆರೆಬೇಕಾದಿತು ಎಂದು ಸಾರ್ವತ್ರಿಕವಾಗಿ ಹಲವರು ಎಚ್ಚರಿಸಿದ್ದಾರೆ. ಇನ್ನು ದೇವಾಲಯ, ಮಠಗಳು ಸರಕಾರದ ಸ್ವಾಧೀನ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಮಠವನ್ನು ಸರಕಾರ ವಶಕ್ಕೆ ತೆಗೆದುಕೊಂಡರೆ ನಾನು ಮಠವನ್ನು ತ್ಯಜಿಸುತ್ತೇನೆ. ನಾನು ನೌಕರನಾಗಿ ಇರಲು ಇಷ್ಟಪಡುವುದಿಲ್ಲ. ಇದು ಸರಕಾರವೇ ವಿಪಕ್ಷದ ಹೋರಾಟಕ್ಕೆ ಅಸ್ತ್ರ ಕೊಟ್ಟಂತಾಗಿದೆ. ನಾನು ಇದರ ವಿರುದ್ಧ ಹೋರಾಟ ಮಾಡಲ್ಲ, ಜನತೆಗೆ ಬಿಟ್ಟಿದ್ದೇನೆ. ಇದರಿಂದ ಸರಕಾರ ಹಿಂದೂ ವಿರೋಧಿ ಎನ್ನುವುದು ಸ್ಪಷ್ಟಗೊಳಿಸುತ್ತಿದೆ ಎಂದಿದ್ದಾರೆ. ಆರಂಭದಿಂದಲೂ ಅಲ್ಪ ಸಂಖ್ಯಾತರು ಬಹು ಸಂಖ್ಯಾತರನ್ನು ಸಮಾನವಾಗಿ ನೋಡಬೇಕು ಎಂದು ಹೇಳುತ್ತಾ ಬಂದಿದ್ದೇನೆ. ಅದ್ರೆ ಇಂದಿನ ಸರ್ಕಾರ ಅದಕ್ಕೆ ವ್ಯತಿರಿಕ್ತವಾಗಿ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.