ಮಂಗಳೂರು, ಫೆ 07 : ನಗರದ ಪಿಲಿಕುಳಕ್ಕೆ ಜತೆಗೂಡಿ ಬಂದಿದ್ದ ಭಿನ್ನ ಕೋಮಿನ ಕಾಲೇಜು ವಿದ್ಯಾಥಿಗಳ ಮೇಲೆ ಹಲ್ಲೆ ನಡೆಸಿದ ಘಟನೆಯ ವೀಡಿಯೊ ಮತ್ತು ವಿದ್ಯಾರ್ಥಿನಿಯರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಅರೋಪದ ಮೇಲೆ ವ್ಯಕ್ತಿಯೋರ್ವನನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪಚ್ಚನಾಡಿ ನಿವಾಸಿ ,ಫೈನಾನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ವಿಶಾದ್ (34) ಎಂದು ಗುರುತಿಸಲಾಗಿದೆ. ಜನವರಿ 2 ರಂದು ಪಿಲಿಕುಳಕ್ಕೆ ವಿಭಿನ್ನ ಸಮುದಾಯದ ವಿದ್ಯಾರ್ಥಿಗಳು ಜೊತೆಗೂಡಿ ಬಂದಿದ್ದರು. ಆಗ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಸಂಪತ್ ಶೆಟ್ಟಿ, ವರದಾ ಮತ್ತು ದಿನೇಶ್ ಸೇರಿದಂತೆ ಕೆಲವರು ಪೊಲೀಸರ ಎದುರಿನಲ್ಲೇ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಯ ವೀಡಿಯೊ ಚಿತ್ರಿಸಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿತ್ತು. ಬಳಿಕ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ತನಿಖೆ ಆರಂಭಿಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಇದೀಗ ಈ ದೃಶ್ಯಾವಳಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಅರೋಪ ಮೇಲೆ ವಿಶಾದ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.