ಚಿಕ್ಕ ಬಳ್ಳಾಪುರ ಫೆ ,07: ಅದಾಗ ತಾನೆ ಹಸೆಮಣೆಯಿಂದ ಇಳಿದು ಮದುವೆ ಸಂಭ್ರಮದಲ್ಲಿದ್ದ ವ್ಯಕ್ತಿಯೋರ್ವ ನೇಣಿನ ಕುಣಿಕೆಗೆ ಕೊರಳೊಡ್ಡಿದ ದಾರುಣ ಘಟನೆ ಚಿಕ್ಕಬಳ್ಳಾಪುರದ ಸೂಲಿಕುಂಟೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಮುನಿರಾಜು (30) ಎಂದು ಗುರುತಿಸಲಾಗಿದೆ. ಫೆ . 5 ರಂದು ಬೆಸ್ಕಾಂ ಲೈನ್ ಮ್ಯಾನ್ ಮುನಿರಾಜು ಅವರ ವಿವಾಹ ಚಿಕ್ಕಬಳ್ಳಾಪುರದ ಕಲ್ಯಾಣಮಂಟಪವೊಂದರಲ್ಲಿ ಅವರ ಅಕ್ಕನ ಮಗಳ ಜೊತೆ ವಿವಾಹ ನೆರವೇರಿತ್ತು. ಸಾವಿಗೆ ಶರಣಾಗುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು ತನಗೆ ಈ ವಿವಾಹ ಇಷ್ಟವಿರಲಿಲ್ಲ. ವೈವಾಹಿಕ ಬದುಕಿನ ಬಗ್ಗೆಯೂ ಆಸಕಿ ಇಲ್ಲ.ಮದುವೆಗೆ ಮುಂಚೆಯೇ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದೆ. ಆದ್ರೆ ಮನೆಯಲ್ಲಿ ಸಂಬಂಧಿಕರು ಇದ್ದ ಕಾರಣ ಆತ್ಮಹತ್ಯೆ ಮಾಡಿಕೊಳ್ಳಲಾಗಲಿಲ್ಲ ಎಂದು ಹೇಳಿದ್ದಾರೆ.ನನ್ನ ಸಾಲವನ್ನು ತೀರಿಸಿ ಎಂದು ಬರೆದಿದ್ದಾನೆ ಎನ್ನಲಾಗಿದೆ. ಈ ಘಟನೆಯಿಂದ ವಿವಾಹದ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದೆ.ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.