ಕುಂದಾಪುರ, ಸೆ17: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 67ನೇ ಜನ್ಮದಿನವನ್ನು ಕುಂದಾಪುರ ಬಿಜೆಪಿ ಮತ್ತು ಎಸ್ಸಿ ಮೋರ್ಚಾ ವತಿಯಿಂದ ವಿಭಿನ್ನವಾಗಿ ಆಚರಿಸಲಾಯಿತು. ಬಸ್ರೂರಿನ ಸ್ಮಶಾನವನ್ನು ಸ್ವಚ್ಛಗೊಳಿಸುವ ಮೂಲಕ ಮುಕ್ತಿಧಾಮದ ಕಸಗಳಿಗೆ ಮುಕ್ತಿಯನ್ನು ಬಿಜೆಪಿ ಕಾರ್ಯಕರ್ತರು ನೀಡಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿಶೋರ್ ಕುಮಾರ್ ಸ್ಚಚತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶ ಕಂಡ ಅದ್ಬುತ ನಾಯಕ. ಕಸ ವಿಲೇವಾರಿ ಎನ್ನುವುದು ದೇಶದ ಬಹುದೊಡ್ಡ ಸಮಸ್ಯೆಯಾಗಿತ್ತು. ಪ್ರತಿ ಮನೆಯಲ್ಲೂ ಸ್ವಚ್ಛತೆಗೆ ಬೆಲೆ ಕೊಡುವ ಉದ್ದೇಶದಿಂದ ಸ್ವಚ್ಛ ಭಾರತ ಮಿಷನ್ ಎಂಬ ಯೋಜನೆ ತಂದು, ದೇಶದ ಪ್ರಗತಿಗೆ ಪ್ರಧಾನಿ ನರೇಂದ್ರ ಮೋದಿ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಈ ಹಿನ್ನೆಲೆ ಪ್ರಧಾನಿ ಮೋದಿ ಅವರು ತಮ್ಮ ಹುಟ್ಟು ಹಬ್ಬವನ್ನು ದುಂದು ವೆಚ್ಚ ಮಾಡಿ ಆಚರಿಸುವುದು ಬೇಡ. ಪರಿಸರ ಸ್ವಚ್ಛಗೊಳಿಸಿ ದೇಶವನ್ನು ಸುಂದರಗೊಳಿಸಿ ಎಂದು ಕರೆ ನೀಡಿದ್ದಾರೆ. ಅದರಂತೆ ನಾವು ಈ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಕುಂದಾಪುರ ಬಿಜೆಪಿ ಅಧ್ಯಕ್ಷ ಕಾಡೂರು ಸುರೇಶ ಶೆಟ್ಟಿ ಇದೇ ವೇಳೆ ಮಾತನಾಡಿ, ಕುಂದಾಪುರ ಬಿಜೆಪಿ ಮಂಡಲ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಈ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದೇವೆ. ಸ್ವಚ್ಛತೆಗೆ ಒತ್ತು ನೀಡುವ ಮೂಲಕ ನಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸುತ್ತಿದ್ದೇವೆ ಎಂದರು.
ಸ್ವಚ್ಛತಾ ಕಾರ್ಯದಲ್ಲಿ ಎಸ್.ಸಿ ಮೋರ್ಚಾದ ಅಧ್ಯಕ್ಷ ಗೋಪಾಲ ಕಳಂಜಿ, ಜಿ.ಪಂ ಸದಸ್ಯೆ ಲಕ್ಷ್ಮಿ ಮಂಜು ಬಿಲ್ಲವ, ತಾ.ಪಂ ಸದಸ್ಯ ಕಿಶನ್ ಹೆಗ್ಡೆ, ಬಿಜೆಪಿ ಮುಖಂಡರಾದ ಮಂಜು ಬಿಲ್ಲವ, ಸದಾನಂದ ಬಳ್ಕೂರು, ಸುನೀಲ್ ಹೇರಿಕುದ್ರು, ಶ್ರೀಕಾಂತ ಬಸ್ರೂರು, ಭಾಸ್ಕರ್ ಬಿಲ್ಲವ ಮೊದಲಾದವರು ಉಪಸ್ಥಿತರಿದ್ದರು.