ಕುಂದಾಪುರ, ಫೆ 06: 26 ವರ್ಷಗಳ ಹಿಂದೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪ್ರೇಮ ಪ್ರಕರಣದ ಪ್ರೇಮಿ ಅತ್ಮಹತ್ಯೆ ಮಂಗಳವಾರ ಅಂಪಾರು ಮೂಡುಬಗೆಯ ತನ್ನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭಾಸ್ಕರ್ ಕೊಠಾರಿ(47) ಆತ್ಮಹತ್ಯೆ ಮಾಡಿಕೊಂಡಿದ್ದು, ಸುಮಾರು 26 ವರ್ಷಗಳ ಹಿಂದೆ ಅನ್ಯಕೋಮಿನ ಯುವತಿಯನ್ನ ಪ್ರೇಮಿಸಿ ರಾಜ್ಯಾದ್ಯಾಂತ ಸುದ್ದಿಯಾಗಿದ್ದ.
ಘಟನೆ ಹಿನ್ನೆಲೆ
ಭಾಸ್ಕರ್ ಕೊಠಾರಿ, ಈ ಹಿಂದೆ ಕುಡಿತದ ಚಟಕ್ಕೆ ಒಳಗಾಗಿದ್ದು, ಆರೋಗ್ಯ ಸಮಸ್ಯೆ ಬಂದ ಹಿನ್ನೆಲೆ ಕುಡಿತವನ್ನು ಕಡಿಮೆ ಮಾಡಿದ್ದ. ಆದರೆ ಇತ್ತೀಚಿಗೆ ಆರೋಗ್ಯ ಸಮಸ್ಯೆ ತೀವ್ರಗೊಂಡ ಹಿನ್ನೆಲೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ಮಂಗಳವಾರ ಅವರ ತಮ್ಮನಾದ ದಿವಾಕರ್ರ ಗೃಹಪ್ರವೇಶ ಸಮಾರಂಭವಿತ್ತು. ಈ ಸಮಾರಂಭದಲ್ಲಿ ಭಾಸ್ಕರ್ ಸುಳಿವೇ ಇಲ್ಲದ ಕಾರಣ, ಮನೆಯವರು ಅವನ ಹುಡುಕಾಟ ಆರಂಭಿಸಿದ್ದರು. ಸುತ್ತಮುತ್ತಲಿನ ಪ್ರದೇಶವನ್ನ ಹುಡುಕಾಡಿದ ಮನೆಯವರಿಗೆ ಭಾಸ್ಕರ್ ಕೊಠಾರಿ ಎಲ್ಲಿಯೂ ಪತ್ತೆಯಾಗಲಿಲ್ಲ. ನಂತರ ಮನೆಯ ಸಮೀಪದ ಬಾವಿಯನ್ನ ಪರಿಶೀಲಿಸಿದಾಗ ಬಾವಿಯಲ್ಲಿ ನೀರೆತ್ತುವ ಪಂಪ್ಗೆ ಅಳವಡಿಸುವ ಫುಟ್ಬಾಲ್ನ ಹಗ್ಗ ತುಂಡರಿಸಿತ್ತು. ಈ ಹಿನ್ನೆಲೆ ಅನುಮಾನಗೊಂಡ ಸ್ಥಳೀಯರು ಮುಳುಗು ತಜ್ಞ ಮಂಜುನಾಥರನ್ನ ಸಂಪರ್ಕಿಸುತ್ತಾರೆ. ಮಧ್ಯಾಹ್ನದ ವೇಳೆ ಸ್ಥಳಕ್ಕೆ ಬಂದ ಮಂಜುನಾಥ್ ಬಾವಿಗಿಳಿದು ಪರಿಶೀಲನೆ ನಡೆಸಿದಾಗ ಭಾಸ್ಕರ್ ಕೊಠಾರಿ ಶವ ಬಾವಿಯೊಳಗೆ ಸಿಲುಕಿಕೊಂಡಿರುವುದು ಕಂಡು ಬಂದಿದೆ. ತಮ್ಮನ ಮನೆಯ ಗೃಹಪ್ರವೇಶ ಕಾರ್ಯ ನಡೆಯುತ್ತಿದ್ದ ಹಿನ್ನೆಲೆ ಕೆಲಕಾಲ ಕಾದು ಸ್ಥಳೀಯರು ಗೃಹಪ್ರವೇಶ ಸಮಾರಂಭ ಮುಗಿದ ಬಳಿಕ ಮಾಹಿತಿ ಮನೆಯವರಿಗೆ ತಿಳಿಸಿದ್ದಾರೆ .
ಗೃಹಪ್ರವೇಶದ ಮುಗಿದ ನಂತರ ಪತ್ನಿಗೆ ವಿಷಯ ರವಾನೆ
ಭಾಸ್ಕರ್ ಕೊಠಾರಿ ಪತ್ನಿ ಆಶಾರಿಗೆ ತಮ್ಮ ಪತಿ ನಾಪತ್ತೆಯಾಗಿರುವುದು ಮಾತ್ರ ತಿಳಿದಿತ್ತು. ಆದರೆ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದಿದ್ದು ಗೃಹಪ್ರವೇಶದ ಬಳಿಕ. ಪೊಲೀಸರು ಬಂದ ಬಳಿಕ ಶವವನ್ನ ಮೇಲಕ್ಕೆತ್ತಿದ ಮಂಜುನಾಥ ಗೃಹಪ್ರವೇಶದ ಕಾರ್ಯಕ್ರಮ ಮುಗಿದ ಬಳಿಕ ಪೊಲೀಸರಿಗೆ ಮತ್ತು ಕುಟುಂಬಸ್ಥರಿಗೆ ಮಾಹಿತಿ ನೀಡಿದ ಸ್ಥಳೀಯರು ಪೊಲೀಸರು ಬಂದ ಬಳಿಕ ಮುಳುಗು ತಜ್ಞ ಮಂಜುನಾಥ್ ಮೂಲಕ ಶವವನ್ನ ಮೇಲಕ್ಕೆತ್ತಿದ್ದಾರೆ.
ರಾಜ್ಯಾದಾದ್ಯಂತ ಸುದ್ಧಿ ಮಾಡಿದ ಪ್ರೇಮಪ್ರಕರಣ
ಭಾಸ್ಕರ್ ಮತ್ತು ಆಕೆಯ ಪತ್ನಿ ಆಶಾ ಮದುವೆಯೆನ್ನುವುದು ಕುಂದಾಪುರದಲ್ಲಿ ಮೊದಲು ಕಂಡಲ್ಲಿ ಗುಂಡು ಮತ್ತು ಕರ್ಫ್ಯೂ ಹಾಕಿದ ಪ್ರೇಮ ಪ್ರಕರಣ. 1992 ರಲ್ಲಿ ಅನ್ಯಕೋಮಿನ ಯುವತಿಯಾದ (ಆಶಾ) ಮುನಾವರ್ ನನ್ನು ಪ್ರೀತಿಸಿದ್ದ. ಈ ಸಂದರ್ಭ ಇವರ ಪ್ರೀತಿ ವಿಚಾರ ಮುನಾವರ್ ಕುಟುಂಬಕ್ಕೆ ತಿಳಿದ ಹಿನ್ನೆಲೆ, ಅವನು ಅಲ್ಲಿಂದ ಪರಾರಿಯಾಗಿದ್ದ. ಈ ಸಂದರ್ಭ ಇವನನ್ನು ಅನ್ಯಕೋಮಿನವರು ಕೊಲೆ ಮಾಡಿದ್ದಾರೆ ಎಂಬ ಸುಳ್ಳು ಸುದ್ಧಿ ಹಬ್ಬಿ ಕೋಮು ಗಲಭೆಯುಂಟಾಗಿತ್ತು. ಈ ನಡುವೆ ಮನಾವರ್ ಕೂಡ ನಾಪತ್ತೆಯಾದಳು, ಈ ಸಂದರ್ಭ ಎರಡು ಕಡೆ ಪರಿಸ್ಥಿತಿ ಉದ್ವಿಘ್ನಗೊಂಡಿತ್ತು. ಕಂಡ್ಲೂರಿನ ಓರ್ವ ಉದ್ಯಮಿಯ ಎಕ್ರೆಗಟ್ಟಲೇ ತೋಟವನ್ನ ಸಂರ್ಪೂಣ ಹಾನಿಗೊಳಿಸಲಾಗಿತ್ತು. ಮಂಗಳೂರು ಜಿಲ್ಲೆಯೊಳಗಿದ್ದ ಕುಂದಾಪುರಕ್ಕೆ ಡಿವೈಎಸ್ಪಿಯಾಗಿದ್ದವರು ದಳಗಾರ್, ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾಪುವಿನಲ್ಲಿ ಈ ಜೋಡಿಗಳನ್ನ ಬಂಧಿಸಿ ಕರೆತರಲಾಯಿತು. ನಂತರ ಎರಡು ಕಡೆಯವರಿಗೆ ಸಮಾಧಾನಪಡಿಸಿದ ಪೊಲೀಸರು ಇಬ್ಬರ ವಿವಾಹವನ್ನ 1992 ರ ಫೆಬ್ರವರಿಯಲ್ಲಿ ಕುಂದಾಪುರದ ನಾರಾಯಣ ಗುರು ಸಭಾಭವನದಲ್ಲಿ ನೆರವೇರಿಸಿದ್ದರು.
ವೈವಾಹಿಕ ಜೀವನ ಸುಖಕರವಾಗಿರಲಿಲ್ಲ
ಪ್ರೇಮ ವಿವಾಹವಾದ ಬಳಿಕ ಮುನಾವರ್ ಹೆಸರು ಆಶಾ ಆಗಿ ಬದಲಾಗುತ್ತದೆ. ಆದರೆ ಭಾಸ್ಕರ್ ಮತ್ತು ಆಶಾ ನಡುವೆ ಕೌಟುಂಬಿಕ ಜೀವನ ಸುಖಕರವಾಗಿರಲಿಲ್ಲ. ಕುಡಿತದ ಚಟಕ್ಕೆ ಒಳಗಾಗಿದ್ದ ಭಾಸ್ಕರ್ನಿಂದಾಗಿ ಜೀವನ ನಿರ್ವಹಣೆ ಕಷ್ಟವಾಗಿತ್ತು. ಆದರೆ ಆಶಾ ಬೀಡಿಕಟ್ಟಿ ತನ್ನ ಜೀವನ ನಿರ್ವಹಣೆ ನಡೆಸುತ್ತಿದ್ದರು. ಹಲವು ವರ್ಷಗಳ ಕಾಲ ಮಕ್ಕಳಾಗದೇ ಸಂಕಟಪಟ್ಟಿದ್ದ ಇವರಿಗೆ 6 ವರ್ಷಗಳ ಕೆಳಗೆ ಹೆಣ್ಣುಮಗು ಹುಟ್ಟಿತ್ತು. ಸ್ಥಳಕ್ಕೆ ಶಂಕರನಾರಾಯಣ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಮಹಜರು ನಡೆಸಿದ್ದು, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.