ಚಿತ್ರ: ಅಭಿಜಿತ್ ಕೊಲ್ಪೆ
ಮಂಗಳೂರು ಫೆ 06: ಕುಲಶೇಖರದ ಸೇಕ್ರಡ್ ಹಾರ್ಟ್ ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕಸದಿಂದ ರಸ ತೆಗೆದಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯ, ಬಾಟಲಿಗಳನ್ನು ಬಳಸಿಕೊಂಡು ಶಾಲಾ ಮೈದಾನದಲ್ಲೇ ಒಂದು ಆಕರ್ಷಕ ಬೆಂಚ್ ನ್ನು ತಯಾರು ಮಾಡಿದ್ದಾರೆ. ನೀರು ಮತ್ತು ಮಣ್ಣಿನಲ್ಲಿ ಕರಗದ ಪ್ಲಾಸ್ಟಿಕ್ ಮತ್ತು ಬಾಟಲುಗಳ ನಿರ್ವಹಣೆ ಕಷ್ಟವಾಗಿರುವಾಗ ಅದನ್ನೇ ಉಪಯೋಗಿಸಿಕೊಂಡು ಬೆಂಚ್ ನ್ನು ತಯಾರು ಮಾಡಿದ್ದಾರೆ. ಇಂತಹ ಕೆಲಸಕ್ಕೆ ಸ್ಪೂರ್ತಿ ತುಂಬಿದವರು ಜರ್ಮನಿಯ ಮಹಿಳೆ ಈಡಾ . ಮಂಗಳೂರಿನಲ್ಲಿ ಸಿಒಡಿಪಿ ಸಂಸ್ಥೆಗೆ ತ್ಯಾಜ ನಿರ್ವಹಣೆ ಅನುಷ್ಠಾನ ಯೋಜನೆಯ ಸಂಪನ್ಮೂಲ ವ್ಯಕ್ತಿಯಾಗಿ ಈಡಾ ಅವರನ್ನು ಸ್ಟಿಟರ್ ಮಿಶಲ್ ಈ ಶಾಲೆಗೆ ಕರೆದುಕೊಂಡು ಬಂದಿದ್ದರು. ಆ ಸಂದರ್ಭದಲ್ಲಿ ತ್ಯಾಜ್ಯ ಸಂಸ್ಕರಣೆ ಬಗ್ಗೆ ಅವರು ಮಕ್ಕಳ ಜತೆ ಸಂವಾದ ನಡೆಸಿದ್ದರು, ಆಗ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಬಳಕೆಯಲ್ಲಿರುವ ತ್ಯಾಜ್ಯಗಳನ್ನು ಸದ್ಬಳಕೆ ಮಾಡುವಂತೆ ತಿಳಿ ಹೇಳಿದ್ದರು. ಅದರಂತೆಯೇ ಸಂಸ್ಥೆಯ 5,6,7 ನೇ ತರಗತಿಯ ಮಕ್ಕಳು ತಮ್ಮ ಪರಿಶ್ರಮದಿಂದ ಈ ಬೆಂಚನ್ನು ತಯಾರಿಸಿದ್ದಾರೆ.
ತಂಪು ಪಾನೀಯಗಳ ಬೇರೆ ಬೇರೆ ಗಾತ್ರದ ಪ್ಲಾಸ್ಟಿಕ್ ಬಾಟಲ್ ಗಳ ಮೂಲಕ ಇದನ್ನು ರಚಿಸಲಾಗುತ್ತಿದ್ದು ಬಾಟಲ್ ಗೆ ಪೆನ್ನು , ಪಾಲಿಥಿನ್ ಕವರ್ ಮುಂತಾದ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ಸೇರಿಸಿ ಗಟ್ಟಿಗೊಳಿಸಿದ್ದಾರೆ. ಬಳಿಕ ಅವುಗಳನ್ನು ಸಿಮೆಂಟ್ , ಮರದ ಹುಡಿ ಮಣ್ಣಿನ ಮೂಲಕ ಜೋಡಿಸಿ ಬೆಂಚು ನಿರ್ಮಿಸಿದ್ದಾರೆ. ಒಂದು ಬಾಟಲ್ ನಲ್ಲಿ ಸುಮಾರು 800 ಗ್ರಾಂಗಳಿಗಿಂತಲೂ ಹೆಚ್ಚು ತ್ಯಾಜ್ಯ ಬಳಕೆಯಾಗಿದೆ. ಸುಮಾರು 200 ಕ್ಕೂ ಹೆಚ್ಚು ಬಾಟಲಿಗಳನ್ನು ಬಳಸಿ ಬೆಂಚು ತಯಾರಿಸಲಾಗಿದೆ. ಈಗಾಗಲೇ ಇಂತಹ ಸುಮಾರು 700 ಬಾಟಲಿಗಳನ್ನು ಮಕ್ಕಳು ತಯಾರಿ ಮಾಡಿದ್ದು, ಅದರಿಂದ ಮುಂದೆ ಶಾಲಾ ಮೈದಾನದಲ್ಲಿ ಇತರ ಸಣ್ಣ ಸಣ್ಣ ಬೆಂಚ್ ಗಳನ್ನು ನಿರ್ಮಾಣ ಮಾಡುವ ಇರಾದೆ ಇವರದ್ದು.